ಬೆಳಗಾವಿ: ಡಾ. ಬಿ. ಆರ್. ಅಂಬೇಡ್ಕರ್, ಸ್ವಾಮಿ ವಿವೇಕಾನಂದ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮರು ವಿನ್ಯಾಸಗೊಂಡ ಹಾಗೂ ದೇಶದ ಪ್ರಥಮ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರಪ್ರಸಾದ್, ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರು, ದೇಶದ ಪ್ರಥಮ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್ ಮತ್ತು ದೇಶದ ಪ್ರಥಮ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರ ತೈಲ ಕಲಾಕೃತಿಗಳನ್ನು ಸುವರ್ಣಸೌಧದ ಸದನದ ಒಳಗೆ ಸಿಎಂ ಸಿದ್ದರಾಮಯ್ಯ ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್, ಪ್ರತಿಪಕ್ಷದ ನಾಯಕ ಆರ್. ಅಶೋಕ್, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಹೆಚ್.ಕೆ. ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಸಂಪುಟದ ಇತರೆ ಸಚಿವರು ಹಾಗೂ ಶಾಸಕರು ಉಪಸ್ಥಿತರಿದ್ದರು.
ಸುವರ್ಣಸೌಧದ ಸದನದೊಳಗೆ ಮಹನೀಯರ ತೈಲಚಿತ್ರ ಅನಾವರಣ (ETV Bharat) ಈಗಾಗಲೇ ಸದನದೊಳಗೆ ಬಸವಣ್ಣ, ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಬಿ.ಆರ್. ಅಂಬೇಡ್ಕರ್, ವೀರ ಸಾವರ್ಕರ್, ಸುಭಾಷ್ ಚಂದ್ರ ಬೋಸ್, ಸ್ವಾಮಿ ವಿವೇಕಾನಂದ ಭಾವಚಿತ್ರ ಅಳವಡಿಸಲಾಗಿದೆ. ಅದಕ್ಕೆ ಈಗ ಹೊಸದಾಗಿ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ಡಾ. ಬಾಬು ರಾಜೇಂದ್ರಪ್ರಸಾದ್, ದೇಶದ ಪ್ರಥಮ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್ ಭಾವಚಿತ್ರ ಅಳವಡಿಸಲಾಗಿದೆ.
ಸುವರ್ಣಸೌಧದ ಸದನದೊಳಗೆ ಮಹನೀಯರ ತೈಲಚಿತ್ರ ಅನಾವರಣ (ETV Bharat) ಈ ಮುಂಚೆ ಶಾಸಕ ಬಸವರಾಜ ರಾಯರೆಡ್ಡಿ ಸುವರ್ಣಸೌಧ ಸಭಾಭವನದಲ್ಲಿ ಗಣ್ಯರ ಭಾವಚಿತ್ರದ ಶೈಲಿಯನ್ನು ಸರಿಪಡಿಸಲು ಹಾಗೂ 10 ಮಂದಿ ಗಣ್ಯರ ಭಾವಚಿತ್ರ ಅಳವಡಿಸಲು ಸ್ಪೀಕರ್ ಯು. ಟಿ. ಖಾದರ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದರು. ಭಾರತದ ಪ್ರಥಮ ರಾಷ್ಟ್ರಪತಿಗಳಾದ ಡಾ. ಬಾಬು ರಾಜೇಂದ್ರ ಪ್ರಸಾದ್, ಪಂಡಿತ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ಎಸ್. ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ ಭಾವಚಿತ್ರ ಹಾಕುವಂತೆ ಕೋರಿದ್ದರು.
ಕರೆಯದೇ ಫೊಟೋ ಅನಾವರಣ ಮಾಡಿಸಲಾಗಿದೆ. ಕರೆದು ಉದ್ಘಾಟನೆ ಮಾಡಬೇಕಿತ್ತು. ನಮಗೆ ವಿಷಯವೇ ಗೊತ್ತಿರಲಿಲ್ಲ. ಬಸವಣ್ಣನ ಫೋಟೋ ಬದಲಾಯಿಸುವಂತೆ ನಮ್ಮ ಕೋರಿಕೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಆಕ್ಷೇಪಿಸಿದರು. ಈ ವೇಳೆ ಸ್ಪೀಕರ್, ಬಸವಣ್ಣನ ಭಾವಚಿತ್ರ ಸರಿಪಡಿಸಲು ಹೇಳಿದಾಗ ಸರಿಪಡಿಸಿದ್ದೇವೆ. ಗಾಂಧಿ ಫೋಟೋ ಸ್ವಲ್ಪ ಮೇಲೆ ಹೋಗಬೇಕು ಅಂದಾಗ ಅದನ್ನು ಮಾಡಿದ್ದೇವೆ. ಮುಂದಿನ ದಿನ ಬಸವಣ್ಣ ಭಾವಚಿತ್ರವನ್ನು ಎಲ್ಲರ ಜೊತೆ ಚರ್ಚಿಸಿ ಅದರ ಶೈಲಿಯನ್ನು ಬದಲಾಯಿಸಲಾಗುತ್ತದೆ ಎಂದು ಹೇಳಿದರು.
ಸುವರ್ಣಸೌಧದ ಸದನದೊಳಗೆ ಮಹನೀಯರ ತೈಲಚಿತ್ರ ಅನಾವರಣ (ETV Bharat) ದೇವೇಗೌಡರ ಫೋಟೋ ಹಾಕಿ: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಭಾವಚಿತ್ರವನ್ನೂ ಹಾಕಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಒತ್ತಾಯಿಸಿದರು. ದಯವಿಟ್ಟು ಈಗಲೇ ಮಾಜಿ ಪ್ರಧಾನಿಗಳ ಭಾವಚಿತ್ರ ಹಾಕಿ ಎಂದು ಮನವಿ ಮಾಡಿದರು. ಆಗ ಮಧ್ಯಪ್ರವೇಶಿಸಿದ ಸ್ಪೀಕರ್, ದೇವೇಗೌಡರ ಮೇಲೆ ನಮಗೆ ಅಪಾರವಾದ ಗೌರವವಿದೆ. ಈಗಲೇ ಭಾವಚಿತ್ರ ಹಾಕಲು ಆಗುವುದಿಲ್ಲ. ಇಲ್ಲಿ ಅಗಲಿದ ಮಹನೀಯರ ಭಾವಚಿತ್ರಗಳನ್ನು ಹಾಕಲಾಗಿದೆ. ನೀವು ಅರ್ಥ ಮಾಡಿಕೊಳ್ಳಬೇಕಾಗುತ್ತೆ ಎಂದು ಮನವರಿಕೆ ಮಾಡಿದರು.
ಇದೇ ವೇಳೆ ಬಿಜೆಪಿ ಸದಸ್ಯರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಫೋಟೋವನ್ನೂ ಸದನದ ಒಳಗಡೆ ಅಳವಡಿಸುವಂತೆ ಮನವಿ ಮಾಡಿದರು. ಆಗ ಸ್ಪೀಕರ್, ಈಗ ಎಲ್ಲರ ಪ್ರತಿನಿಧಿಯಾಗಿ ಇಷ್ಟು ಮಂದಿ ಮಹನೀಯರ ಭಾವಚಿತ್ರಗಳನ್ನು ಹಾಕಲಾಗಿದೆ. ಮುಂದಿನ ದಿನಗಳಲ್ಲಿ ನೋಡೋಣ ಎಂದು ಭರವಸೆ ನೀಡಿದರು.
ಸುವರ್ಣಸೌಧದ ಸದನದೊಳಗೆ ಮಹನೀಯರ ತೈಲಚಿತ್ರ ಅನಾವರಣ (ETV Bharat) ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ಎಲ್ಲಾ ಮಹನೀಯರು ದೇಶಕ್ಕೆ ಸೇವೆ ಮಾಡಿದವರು. ಸಮಾಜ ಸೇವೆ ಮಾಡಿದವರು. ಈ ಹಿಂದಿನ ಸಭಾಧ್ಯಕ್ಷರು ಸಭಾಂಗಣದಲ್ಲಿ ಕೆಲ ಫೊಟೋ ಹಾಕಿದ್ದರು. ನಾವು ಅದನ್ನು ಪ್ರಶ್ನೆ ಮಾಡಿರಲಿಲ್ಲ. ಇವರೆಲ್ಲ ಸಾಮಾಜಿಕವಾಗಿ ಕ್ರಾಂತಿಕಾರಕ ಸುಧಾರಣೆ ಮಾಡಿದವರು ಎಂದು ತಿಳಿಸಿದರು.
ಇದನ್ನೂ ಓದಿ:ಬೆಳಗಾವಿ ಸುವರ್ಣಸೌಧದಲ್ಲಿ 'ಅನುಭವ ಮಂಟಪ'ದ ತೈಲವರ್ಣ ಚಿತ್ರ: ಇದರ ವಿಶೇಷತೆಗಳೇನು?