ಆನೇಕಲ್ :ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ಅಡ್ಡಿಪಡಿಸುತ್ತಿರುವ ಹಿನ್ನೆಲೆ ತಮಿಳುನಾಡು ಸರ್ಕಾರದ ವಿರುದ್ಧ ಅತ್ತಿಬೆಲೆ ಗಡಿಯಲ್ಲಿ ಕನ್ನಡ ಜಾಗೃತಿ ವೇದಿಕೆ ಹಾಗೂ ಕನ್ನಡ ಒಕ್ಕೂಟದಿಂದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕನ್ನಡ ಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಪ್ರತಿಭಟನೆ ಆಯೋಜನೆ ಮಾಡಲಾಗಿತ್ತು. ಪ್ರತಿಭಟನೆ ಹಿನ್ನೆಲೆ ಗಡಿ ಗೋಪುರದ ಬಳಿ ಪೊಲೀಸ್ ಬಿಗಿ ಭದ್ರತೆ ಕೈಗೊಂಡಿದ್ದರು.
ಕನ್ನಡ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಮಂಜುನಾಥ್ ದೇವ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ತಮಿಳುನಾಡು ಸರ್ಕಾರ ಹೆದರಿಸಿ, ಬೆದರಿಸಿ ಕರ್ನಾಟಕದ ಮೇಲೆ ಒತ್ತಡ ತರುತ್ತಿದೆ. ಬೆಂಗಳೂರಿನ ಜನರು ನೀರಿನ ಬದಲು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ರಾಜ್ಯದಲ್ಲಿ ನೀರಿಗೆ ಹಾಹಾಕಾರ ಉಂಟಾಗಿದೆ. ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ಅಡ್ಡಿಪಡಿಸಬಾರದು. ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಮಿಳುನಾಡಿನಲ್ಲಿ ದ್ವೇಷವನ್ನು ಮಾಡುತ್ತಿದ್ದಾರೆ. ಅಲ್ಲಿನ ರಾಜಕಾರಣಿಗಳು ಮೇಕೆದಾಟನ್ನು ವಿರೋಧಿಸುತ್ತಿದ್ದಾರೆ. ಕಾವೇರಿ ಬಗ್ಗೆಯೂ ಕ್ಯಾತೆ ತೆಗೆಯುತ್ತಾರೆ. ನೀವು ಮೇಕೆದಾಟನ್ನು ರಾಜಕೀಯ ಮಾಡಬೇಡಿ ಎಂದು ತಮಿಳುನಾಡು ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ವಾಟಾಳ್ ನಾಗರಾಜ್ ಹಾಗೂ ಮಂಜುನಾಥ್ ದೇವ ಅವರನ್ನ ಅತ್ತಿಬೆಲೆ ಪೊಲೀಸರು ವಶಕ್ಕೆ ಪಡೆದರು.
ಇದನ್ನೂ ಓದಿ :ಮಹದಾಯಿ, ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಖಾಲಿ ಬಿಂದಿಗೆ ಹಿಡಿದು ವಾಟಾಳ್ ಪ್ರತಿಭಟನೆ