ಬಾಗಲಕೋಟೆ: ಈಮಾವಿನ ಹಣ್ಣು ಕೆಜಿಗೆ 2.50 ಲಕ್ಷ ಎಂದರೆ ನಂಬುತ್ತೀರಾ? ಹೆಚ್ಚು ಔಷಧ ಗುಣವುಳ್ಳ, ಪೋಷಕಾಂಶ ಒಳಗೊಂಡಿರುವ ಈ ಮಾವಿನ ಹಣ್ಣಿನ ತಳಿ ಹೆಸರು ಮಿಯಾ ಜಾಕಿ, ಇದು ಜಗತ್ತಿನಲ್ಲೆಡೆ ಬೇಡಿಕೆ ಇರುವ ಮಾವಿನ ಹಣ್ಣು ಇದಾಗಿದೆ.
ಇಂದು ಸ್ಥಳೀಯ ವಿದ್ಯಾಗಿರಿಯ ಕಾಳಿದಾಸ ಕಲ್ಯಾಣ ಮಂಟಪದ ಆವರಣದಲ್ಲಿ ಮೂರು ದಿನ ಕಾಲ ನಡೆದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಮಿಯಾ ಜಾಕಿ ಮಾವಿನ ಹಣ್ಣು ಪ್ರಮುಖ ಆಕರ್ಷಣೆ ಕೇಂದ್ರ ಬಿಂದುವಾಗಿತ್ತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹಾಗೂ ಜಿಪಂ ಸಿಇಒ ಶಶಿಧರ ಕುರೇರ ಜಂಟಿಯಾಗಿ ಚಾಲನೆ ನೀಡಿದರು.
ಜಿಲ್ಲಾಧಿಕಾರಿ ಜಾನಕಿ ಕೆ ಎಂ ಮಾತನಾಡಿ, ರೈತರಿಂದ ನೇರವಾಗಿ ಗ್ರಾಹಕರು ಖರೀದಿ ಮಾಡಬಹುದು. ಕೃತಕವಾಗಿ ವಿವಿಧ ರಾಸಾಯನಿಕ ವಸ್ತುಗಳನ್ನು ಬಳಸಿ, ಹಣ್ಣುಗಳ ಮಾರಾಟ ಮಾಡಲಾಗುತ್ತಿದೆ. ಇದು ಆರೋಗ್ಯದ ಮೇಲೆ ಹಾನಿ ಮಾಡುತ್ತಿರುವುದು ಹಲವಾರು ಪ್ರಕರಣಗಳಿಂದ ತಿಳಿದು ಬಂದಿದೆ. ಈ ಮೇಳದಲ್ಲಿ ರೈತರೇ ತಾವು ಬೆಳೆದ ಮಾವಿನ ಹಣ್ಣನ್ನು ಮಾರಾಟ ಮಾಡುತ್ತಿರುವುದರಿಂದ ಉತ್ತಮ ಗುಣಮಟ್ಟದ ಹಣ್ಣುಗಳಾಗಿವೆ. ಉತ್ತಮ ಬೆಲೆಗೆ ಮಾರಾಟ ಮಾಡುತ್ತಿದ್ದು, ಮಾವು ಪ್ರಿಯರು ಇದರ ಉಪಯೋಗ ಪಡೆದುಕೊಳ್ಳುವಂತ ಸಲಹೆ ನೀಡಿದರು.