ರಾಯಚೂರು/ಬಳ್ಳಾರಿ:ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಅವ್ಯವಹಾರ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳಿಂದ ವಿಚಾರಣೆಗೊಳಗಾಗಿದ್ದ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಮಹರ್ಷಿ ವಾಲ್ಮೀಕಿ ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್ ಹಾಗೂ ಮಾಜಿ ಸಚಿವ ಬಿ.ನಾಗೇಂದ್ರ ಅವರ ಮನೆಗಳ ಮೇಲೆ ಬೆಂಗಳೂರಿನ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಇಂದು ಏಕಕಾಲದಲ್ಲಿ ದಾಳಿ ನಡೆಸಿದರು.
ಬೆಂಗಳೂರು, ಬಳ್ಳಾರಿ ಹಾಗೂ ರಾಯಚೂರಿನಲ್ಲಿರುವ ನಾಗೇಂದ್ರ ಹಾಗೂ ಬಸವನಗೌಡ ದದ್ದಲ್ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಲಾಗಿದೆ. ಜೊತೆಗೆ ವಸಂತನಗರದಲ್ಲಿ ವಾಲ್ಮೀಕಿ ನಿಗಮದ ಕಚೇರಿ, ಎಂ.ಜಿ.ರಸ್ತೆಯ ಯೂನಿಯನ್ ಬ್ಯಾಂಕ್ ಕಚೇರಿ ಹಾಗೂ ಪ್ರಕರಣದ ಕೆಲ ಆರೋಪಿಗಳ ಮನೆ ಸೇರಿದಂತೆ 15ಕ್ಕಿಂತ ಹೆಚ್ಚು ಕಡೆಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಮನೆಯಲ್ಲಿರುವ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.
ಮೂವರು ವಶಕ್ಕೆ: ಬಳ್ಳಾರಿಯಲ್ಲಿ ಬಿ.ನಾಗೇಂದ್ರ ಅವರ ಇಬ್ಬರು ಆಪ್ತ ಸಹಾಯಕರಾಗಿದ್ದ ವಿಜಯಕುಮಾರ್ ಮತ್ತು ಚೇತನ್ ಎಂಬವರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮುಂಜಾನೆ, ಸಿಆರ್ಪಿಎಫ್ ಭದ್ರತೆಯೊಂದಿಗೆ ಮೂರು ತಂಡಗಳಾಗಿ ಬಳ್ಳಾರಿಗೆ ಆಗಮಿಸಿದ ಇಡಿ ಅಧಿಕಾರಿಗಳು, ನೆಹರು ಕಾಲೊನಿಯಲ್ಲಿರುವ ನಾಗೇಂದ್ರ ಮನೆ ಮೇಲೆ ದಾಳಿ ಮಾಡಿದರು. ಸಚಿವರ ಪಿಎ ಹರೀಶ್ ಎಂಬುವರನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆದ ಅಧಿಕಾರಿಗಳು, ವಿಚಾರಣೆ ನಡೆಸುತ್ತಿದ್ದಾರೆ.