ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (ಕೆಎಂವಿಎಸ್‌ಟಿಡಿಸಿಎಲ್) ಬಹುಕೋಟಿ ಹಣ ದುರ್ಬಳಕೆ ಪ್ರಕರಣದಲ್ಲಿ ಮಾಜಿ ಸಚಿವ ಬಿ ನಾಗೇಂದ್ರ ಆಪ್ತ ನೆಕ್ಕುಂಟಿ ನಾಗರಾಜ್‌ಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಸಿಐಡಿಯ ವಿಶೇಷ ತನಿಖಾ ದಳದಿಂದ (ಎಸ್‌ಐಟಿ) ತನಿಖೆ ನಡೆದಿರುವ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ಕೋರಿ ನೆಕ್ಕುಂಟಿ ನಾಗರಾಜ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಅಲ್ಲದೆ, ನೆಕ್ಕುಂಟಿ ನಾಗರಾಜ್ ಅವರು 1 ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್, ಇಬ್ಬರ ಭದ್ರತೆ ಒದಗಿಸಬೇಕು. ವಿಚಾರಣಾಧೀನ ನ್ಯಾಯಾಲಯ ವಿನಾಯಿತಿ ನೀಡದ ಹೊರತು ವಿಚಾರಣೆಯ ಎಲ್ಲಾ ದಿನ ನ್ಯಾಯಾಲಯದಲ್ಲಿ ಹಾಜರಿರಬೇಕು. ಪ್ರಾಸಿಕ್ಯೂಷನ್ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು. ಪ್ರಕರಣ ವಿಲೇವಾರಿಯಾಗುವವರೆಗೆ ನ್ಯಾಯಾಲಯದ ಅನುಮತಿ ಪಡೆಯದೇ ವ್ಯಾಪ್ತಿ ತೊರೆಯುವಂತಿಲ್ಲ ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.
ನ್ಯಾಯಪೀಠ ಹೇಳಿದ್ದೇನು?:ವಾಲ್ಮೀಕಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ 5ನೇ ಆರೋಪಿ ಜೊತೆಗೆ ಅರ್ಜಿದಾರರು ಇತರ ಆರೋಪಿಗಳೊಂದಿಗೆ ಪಿತೂರಿ ನಡೆಸಿ ನಿಗಮದ ನಿಶ್ಚಿತ ಠೇವಣಿಯಲ್ಲಿನ ಹಣವನ್ನು ವಿಜಯವಾಡದಲ್ಲಿನ ಮತ್ತೊಬ್ಬ ಆರೋಪಿ ಸತ್ಯನಾರಾಯಣ ಏಕತಾರಿ ವ್ಯವಸ್ಥಾಪಕ ನಿರ್ದೇಶಕರಾಗಿರುವ ಫಸ್ಟ್ ಕ್ರೆಡಿಟ್ ಕೊ-ಆಪರೇಟಿವ್ ಫೈನಾನ್ಸಿಂಗ್ ಬ್ಯಾಂಕ್‌ಗೆ ವರ್ಗಾವಣೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಆನಂತರ ಈ ಹಣವನ್ನು ಖಾಸಗಿ ವ್ಯಕ್ತಿಗಳ ಖಾತೆಗೆ ವರ್ಗಾವಣೆ ಮಾಡಲಾಗಿದೆ.