ಬೆಂಗಳೂರು: ವೈಕುಂಠ ಏಕಾದಶಿಯ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ನಗರದ ಹಲವು ವಿಷ್ಣು ದೇವಾಲಯಗಳಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಶುಕ್ರವಾರ ಬೆಳಗ್ಗೆನಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಆರಂಭಗೊಳ್ಳಲಿವೆ. ಇನ್ನು ಬೆಳಗ್ಗಿನಿಂದ ರಾತ್ರಿವರೆಗೆ ವೈಕುಂಠದ್ವಾರದ ಪ್ರವೇಶಕ್ಕೆ ಅವಕಾಶವನ್ನೂ ಕಲ್ಪಿಸಲಾಗಿದೆ.
ನಗರದ ವೈಯ್ಯಾಲಿಕಾವಲ್‌ನ ಟಿಟಿಡಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ಜೆ.ಪಿ.ನಗರದ ತಿರುಮಲಗಿರಿ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ, ಸಂಜಯನಗರದ ರಾಧಾಕೃಷ್ಣ ಮಂದಿರ, ಇಸ್ಕಾನ್ ದೇವಸ್ಥಾನ, ಕೋಟೆ ವೆಂಕಟೇಶ್ವರ ದೇವಾಲಯ, ಶ್ರೀನಗರದ ವೆಂಕಟರಮಣ ದೇವಸ್ಥಾನ, ವಿ.ವಿ.ಪುರದ ಲಕ್ಷ್ಮೀ ವೆಂಕಟರಮಣ ದೇವಾಲಯಗಳು ಸೇರಿದಂತೆ ಹಲವು ದೇವಾಲಯಗಳಲ್ಲಿ ಇಂದು ಮಧ್ಯರಾತ್ರಿಯಿಂದಲೇ ಪೂಜಾ ಸಿದ್ಧತೆ ನಡೆಸಲಾಗುತ್ತಿದೆ.
ಭದ್ರತಾ ವ್ಯವಸ್ಥೆ :ಕೆಲ ದೇವಾಲಯಗಳಲ್ಲಿ ನಾಳೆ ನಸುಕಿನ 3.30 ರಿಂದಲೇ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ವೈಕುಂಠ ದ್ವಾರದ ಮೂಲಕ ಸಾಗಿ ದೇವರ ದರ್ಶನ ಪಡೆದು ಭಕ್ತರು ಪುನೀತರಾಗಲಿದ್ದಾರೆ. ಹಿರಿಯ ನಾಗರಿಕರಿಗೆ ಶೀಘ್ರ ದರ್ಶನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ದೇವಸ್ಥಾನದಲ್ಲಿ ಕುಡಿಯುವ ನೀರು, ಲಡ್ಡು ಪ್ರಸಾದವನ್ನು ವಿತರಿಸಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಗದ್ದಲ ಉಂಟಾಗದಂತೆ ದೇವಸ್ಥಾನಗಳಲ್ಲಿ ಬ್ಯಾರಿಕೇಡ್ ಅಳವಡಿಸಿ, ಭದ್ರತಾ ವ್ಯವಸ್ಥೆಯನ್ನೂ ಕೈಗೊಳ್ಳಲಾಗಿದೆ.
ಎಲ್ಲ ವೆಂಕಟೇಶ್ವರ ದೇವಾಲಯಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆವರೆಗೂ ವೇದಪಾರಾಯಣ, ನಾದಸ್ವರ, ಗೀತಾಪಾರಾಯಣ, ಹಾಡು, ಭರತನಾಟ್ಯ, ವೆಂಕಟೇಶ್ವರ ಸಹಸ್ರನಾಮ, ಭಜನೆ, ಹರಿಕಥೆ, ದೇವರ ನಾಮಸ್ಮರಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಇಸ್ಕಾನ್‌ನಲ್ಲಿ ಬೆಳಗ್ಗೆ 3 ಗಂಟೆಯಿಂದ ವೆಂಕಟೇಶ್ವರ ಸುಪ್ರಭಾತ ಸ್ತೋತ್ರ ಆರಂಭವಾಗಲಿದೆ. ಶ್ರೀನಿವಾಸ ಗೋವಿಂದನಿಗೆ ಧೂಪ, ದೀಪ, ಅರ್ಘ್ಯ, ವಸ್ತ್ರ, ಪುಷ್ಪ ಮತ್ತು ಚಾಮರಗಳಿಂದ ಆರತಿಯನ್ನು ಅರ್ಪಿಸಲಾಗುತ್ತದೆ.