ಕರ್ನಾಟಕ

karnataka

ETV Bharat / state

ಮುಡಾ: ಇ.ಡಿ ವಿಚಾರಣೆ ಎದುರಿಸಿದ ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್ - MUDA SCAM

ಮುಡಾ ಹಗರಣ ಸಂಬಂಧ ನಗರಾಭಿವೃದ್ದಿ ಇಲಾಖೆಯ ಕಾರ್ಯದರ್ಶಿ ದೀಪಾ ಚೋಳನ್ ಅವರು ಜಾರಿ ನಿರ್ದೇಶನಾಲಯದ ಕಚೇರಿಗೆ ಆಗಮಿಸಿ ವಿಚಾರಣೆ ಎದುರಿಸಿದ್ದಾರೆ.

ದೀಪಾ ಚೋಳನ್
ನಗರಾಭಿವೃದ್ದಿ ಇಲಾಖೆಯ ಕಾರ್ಯದರ್ಶಿ ದೀಪಾ ಚೋಳನ್ (ETV Bharat)

By ETV Bharat Karnataka Team

Published : Dec 3, 2024, 10:38 PM IST

ಬೆಂಗಳೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ದಿ ಇಲಾಖೆಯ ಕಾರ್ಯದರ್ಶಿ ದೀಪಾ ಚೋಳನ್ ಅವರು ಇಂದು ಜಾರಿ ನಿರ್ದೇಶನಾಲಯ(ಇ.ಡಿ) ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸಿದರು.

ಇ.ಡಿ ಅಧಿಕಾರಿಗಳು ಸೋಮವಾರ ವಿಧಾನಸೌಧದಲ್ಲಿರುವ ನಗರಾಭಿವೃದ್ಧಿ ಇಲಾಖೆ ಕಚೇರಿಗೆ ತೆರಳಿ ದೀಪಾ ಚೋಳನ್‌ ಅವರಿಗೆ ನೋಟಿಸ್ ನೀಡಿದ್ದರು. ಈ ಹಿನ್ನೆೆಲೆಯಲ್ಲಿ ಅಗತ್ಯ ದಾಖಲೆಗಳ ಸಮೇತ ಇಂದು ಬೆಳಗ್ಗೆೆ 11 ಗಂಟೆಗೆ ಶಾಂತಿನಗರದಲ್ಲಿರುವ ಇ.ಡಿ ಕಚೇರಿಗೆ ಆಗಮಿಸಿದ ದೀಪಾ ಚೋಳನ್ ಅವರನ್ನು ಸಂಜೆ 7 ಗಂಟೆವರೆಗೂ ವಿಚಾರಣೆಗೆ ಒಳಪಡಿಸಲಾಗಿದೆ.

ಮುಡಾ ಪ್ರಾಧಿಕಾರ ನಗರಾಭಿವೃದ್ಧಿ ಇಲಾಖೆ ಅಧೀನದಲ್ಲಿ ಬರುವುದರಿಂದ ಮುಡಾ ನಿವೇಶನ ಹಂಚಿಕೆ ಸಂದರ್ಭದಲ್ಲಿ ಇಲಾಖೆಯ ಕಾರ್ಯದರ್ಶಿ ಯಾರಿದ್ದರು?, ನಿವೇಶನ ಹಂಚಿಕೆ ಹಗರಣ ಆರೋಪ ಕೇಳಿ ಬಂದ ಬಳಿಕ ಮುಡಾದ ಅಧಿಕಾರಿಗಳ ಜತೆ ಸಭೆ ನಡೆಸಿದ್ದಿರಾ?, ನಿವೇಶನ ಹಂಚಿಕೆ ಹಾಗೂ ವಾಪಸ್ ನೀಡುವುದೂ ಸೇರಿ ಇತರೆ ಪ್ರಕ್ರಿಯೆಗಳು ಇಲಾಖೆ ಗಮನಕ್ಕೆ ಇತ್ತೇ? ಅಥವಾ ಗಮನಕ್ಕೆ ಬಂದರೂ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲವೇ ಎಂದು ಪ್ರಶ್ನಿಸಲಾಗಿದೆ ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿಗೆ ಯಾವ ಆಧಾರದ ಮೇಲೆ 14 ನಿವೇಶನ ಕೊಡಲಾಗಿತ್ತು?, ಯಾವ ಕಾರಣಕ್ಕೆೆ ವಾಪಸ್ ನೀಡಿದ್ದಾರೆ?, ಪ್ರಮುಖವಾಗಿ ಇಲಾಖೆಯ ಸಚಿವರು ಏಕಾಏಕಿ ಹೆಲಿಕಾಪ್ಟರ್‌ನಲ್ಲಿ ತೆರಳಿ ಮುಡಾದ ಸಾವಿರಾರರು ಕಡತಗಳನ್ನು ಹೊತ್ತೊಯ್ದಿದ್ದಾರೆ ಎಂಬ ಆರೋಪವಿದೆ, ಈ ಕುರಿತು ಇಲಾಖೆಯ ಕಾರ್ಯದರ್ಶಿಯಾಗಿ ನಿಮಗೆ ಮಾಹಿತಿ ಇದೆಯೇ? ಸೇರಿದಂತೆ ಹಲವು ಪ್ರಶ್ನೆೆಗಳನ್ನು ವಿಚಾರಣೆಯಲ್ಲಿ ಕೇಳಲಾಗಿದೆ ಎಂಬ ಮಾಹಿತಿ ದೊರೆತಿದೆ.

ದೀಪಾ ಚೋಳನ್ ತೆಗೆದುಕೊಂಡು ಹೋಗಿದ್ದ ದಾಖಲೆಗಳನ್ನು ಇ.ಡಿ ಅಧಿಕಾರಿಗಳು ಪಡೆದುಕೊಂಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಅಗತ್ಯಬಿದ್ದರೆ ಮತ್ತೊಮ್ಮೆ ವಿಚಾರಣೆಗೆ ಹಾಜರಾಗಬೇಕಾಗುತ್ತದೆ ಎಂದು ಸೂಚಿಸಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಸಿಎಂ ಅಧ್ಯಕ್ಷತೆಯಲ್ಲಿ ತೆರಿಗೆ ಪ್ರಗತಿ ಪರಿಶೀಲನಾ ಸಭೆ: ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕಕ್ಕೆ ದೇಶದಲ್ಲಿ 2ನೇ ಸ್ಥಾನ

ABOUT THE AUTHOR

...view details