ಹುಬ್ಬಳ್ಳಿ/ಧಾರವಾಡ: ''ಈ ಪ್ರಪಂಚದಲ್ಲಿ ಹಲವು ಬಗೆಯ ಗಾಂಜಾಗಳಿವೆ. ನಮ್ಮನ್ನು ಯಾಮಾರಿಸುವಂತಹ ಹಲವು ಅಮಲುಗಳಿವೆ. ನಮ್ಮ ಜ್ಞಾನವೊಂದೇ ಅದಕ್ಕೆ ಪರಿಹಾರ. ಸಮಸ್ಯೆ ಮತ್ತು ಪರಿಹಾರ ಎರಡೂ ನಮ್ಮ ತಲೆಯೇ. ಅದನ್ನರಿತುಕೊಂಡರೆ ಯಾವುದೇ ಡ್ರಗ್ಸ್, ಆಲ್ಕೋಹಾಲ್ ಹತ್ತಿರ ಬರೋದಿಲ್ಲ'' ಎಂದು ನಟ ಉಪೇಂದ್ರ ತಿಳಿಸಿದರು.
ಅವಳಿ ನಗರ ಹುಬ್ಬಳ್ಳಿ ಧಾರವಾಡದಲ್ಲಿ ಮಾದಕ ವಸ್ತು ವಿರೋಧಿ ಜಾಗೃತಿ ನಡೆಯುತ್ತಿದ್ದು, ಅಭಿಯಾನಕ್ಕೆ ಸ್ಯಾಂಡಲ್ವುಡ್ನ ರಿಯಲ್ ಸ್ಟಾರ್ ಉಪ್ಪಿ ಸಾಥ್ ಕೊಟ್ಟಿದ್ದಾರೆ. ಜೊತೆಗೆ, ತಮ್ಮ ಮುಂಬರುವ 'ಯು ಐ' ಸಿನಿಮಾದ ಪ್ರಚಾರ ನಡೆಸಿದರು.
ಮಾದಕ ವಸ್ತು ನಿರ್ಮೂಲನಾ ಜಾಗೃತಿಯಲ್ಲಿ ಉಪೇಂದ್ರ (ETV Bharat) ಧಾರವಾಡದಲ್ಲಿ ಉಪೇಂದ್ರ:ಧಾರವಾಡದ ಜೆಎಸ್ಎಸ್ ಕಾಲೇಜು ಮೈದಾನದಲ್ಲಿ ಪೊಲೀಸ್ ಇಲಾಖೆಯಿಂದ ಮಾದಕ ವಸ್ತು ವಿರೋಧಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಯುಐ ಚಿತ್ರದ ಪ್ರಮೋಷನ್ ಹಾಗೂ ಮಾದಕ ವಸ್ತು ವಿರೋಧಿ ಜಾಗೃತಿ ಅಂಗವಾಗಿ ಉಪೇಂದ್ರ ಅವರು ಆಗಮಿಸಿ ವಿದ್ಯಾರ್ಥಿಗಳಲ್ಲಿ ತಿಳುವಳಿಕೆ ಮೂಡಿಸಿದರು.
ಧಾರವಾಡದ ವಿವಿಧ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗಿಯಾಗಿ ತಮ್ಮ ಮೆಚ್ಚಿನ ನಟನನ್ನು ಕಣ್ತುಂಬಿಕೊಂಡರು. ತಮ್ಮ ಚಿತ್ರದ ಡೈಲಾಗ್ ಹೊಡೆದು ವಿದ್ಯಾರ್ಥಿಗಳನ್ನು ರಂಜಿಸಿದರು. ಯುವ ಜನತೆ ಚಪ್ಪಾಳೆ, ಶಿಳ್ಳೆ ಹೊಡೆದು ತಮ್ಮ ಸಂಭ್ರಮ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ದಿವ್ಯಪ್ರಭು, ಹು-ಧಾ ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಸೇರಿದಂತೆ ಹಲವರು ಅಭಿಯಾನದಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ:'ಪುಷ್ಪ 2' ಪ್ರಚಾರ: ಡಿ.8ರಂದು ಅಲ್ಲು ಅರ್ಜುನ್ ಬೆಂಗಳೂರಿಗೆ
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಉಪೇಂದ್ರ, "ಸಿನಿಮಾ ಪ್ರಮೋಷನ್ ಚೆನ್ನಾಗಿ ನಡೆದಿದೆ. ಹುಬ್ಬಳ್ಳಿ-ಧಾರವಾಡ ಯುವ ಜನರ ನಾಡು. ಇಲ್ಲಿಗೆ ಬಂದಾಗ ಸಿಗುವ ಖುಷಿ, ಪ್ರೋತ್ಸಾಹ ಅದ್ಭುತ. ನಮ್ಮ ಸಿನಿಮಾ ಪ್ರಮೋಷನ್ ಧಾರವಾಡದಿಂದ ಶುರುವಾಗಿದೆ. ಇದು ನಮ್ಮ ಅದೃಷ್ಟ ಎಂದು ಸಂತಸ ವ್ಯಕ್ತಪಡಿಸಿದರು. ಜೊತೆಗೆ, ಮಾದಕ ವಸ್ತು ವಿರೋಧಿ ಜಾಗೃತಿ ಕಾರ್ಯಕ್ರಮ ಮಾಡುತ್ತಿರಬೇಕು. ಪ್ರತಿಯೊಬ್ಬರೂ ಜಾಗೃತಿ ವಹಿಸಬೇಕು. ಇದೇ 20ಕ್ಕೆ ಯು ಐ ಸಿನಿಮಾ ಬಿಡುಗಡೆ ಆಗುತ್ತಿದೆ. ಎಲ್ಲರೂ ಸಿನಿಮಾ ವೀಕ್ಷಿಸಿ ಪ್ರೋತ್ಸಾಹಿಸಿ" ಎಂದು ಮನವಿ ಮಾಡಿಕೊಂಡರು.
ಇದನ್ನೂ ಓದಿ:16 ವರ್ಷಗಳ ಹಿಂದೆಯೇ ಶೂಟಿಂಗ್ ಮುಗಿಸಿರೋ ಉಪೇಂದ್ರ-ರಮ್ಯಾ ಅಭಿನಯದ 'ರಕ್ತ ಕಾಶ್ಮೀರ' ಬಿಡುಗಡೆಗೆ ರೆಡಿ
ಹುಬ್ಬಳ್ಳಿಯಲ್ಲಿ ಉಪ್ಪಿ: ನಗರದ ಬಿವಿಬಿ ಕಾಲೇಜಿನಲ್ಲಿ ಮಾದಕ ವಸ್ತು ಬಳಕೆ ವಿರುದ್ಧ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದರು. ಬಿವಿಬಿ ಕಾಲೇಜಿನಿಂದ ತೋಳನಕೆರೆವರೆಗೆ ವಾಕಥಾನ್ ಮೂಲಕ ತೆರಳಿದರು. ಹು-ಧಾ ಅವಳಿ ನಗರದ ಎಲ್ಲಾ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳ ಸಹಭಾಗಿತ್ವದಲ್ಲಿ ಅಪರಾಧ ತಡೆ, ಸಂಚಾರ ನಿಯಮ ಮತ್ತು ಮಾದಕ ವಸ್ತು ಬಳಕೆ ವಿರುದ್ಧ ಯುವ ಸಮುದಾಯಕ್ಕೆ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು, ಹು-ಧಾ ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್, ಪೊಲೀಸ್ ಅಧಿಕಾರಿಗಳು, ಕಾಲೇಜುಗಳ ಆಡಳಿತ ಮಂಡಳಿ ಹಾಗೂ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.