ಬೆಂಗಳೂರು: ಗೃಹ ಬಳಕೆದಾರರಿಗೆ ಶುದ್ಧ, ಮಾಲಿನ್ಯರಹಿತ, ಸುರಕ್ಷಿತ ಹಾಗೂ ಕೈಗೆಟುಕುವ ದರದಲ್ಲಿ ಅನಿರ್ಬಂಧಿತ ವಿದ್ಯುತ್ ಪೂರೈಕೆಗೆ ಕ್ರಿಯಾ ಯೋಜನೆ ರೂಪಿಸಲು ಕೋರಿ 2022ರಲ್ಲಿ ಸಲ್ಲಿಸಿರುವ ಅರ್ಜಿ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಅಂತಿಮ ಅವಕಾಶ ನೀಡಿತು.
ಕೋರಮಂಗಲ ನಿವಾಸಿ ಮುರಳೀಧರ ರಾವ್ ಎಂಬವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರ ಮುರಳೀಧರ ರಾವ್ ವಾದ ಮಂಡಿಸಿ, ಅರ್ಜಿ ಸಲ್ಲಿಸಿ ಮೂರು ವರ್ಷ ಆಗಿದೆ. ಆದರೆ ಸರ್ಕಾರ ಹಾಗೂ ಸಂಬಂಧಿಸಿದ ಪ್ರಾಧಿಕಾರಗಳು ಈವರೆಗೆ ಸಮರ್ಪಕ ಉತ್ತರ ಕೊಟ್ಟಿಲ್ಲ ಎಂಬ ವಿಚಾರವನ್ನು ನ್ಯಾಯಪೀಠದ ಗಮನಕ್ಕೆ ತಂದರು. ಇದನ್ನು ಗಮನಿಸಿದ ನ್ಯಾಯಪೀಠ, 2022ರಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈವರೆಗೆ ಯಾಕೆ ಉತ್ತರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.
ಕೊನೆಗೆ ಅರ್ಜಿಗೆ ಉತ್ತರಿಸುವಂತೆ ರಾಜ್ಯ ಸರ್ಕಾರ, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಿತು. ಇದು ಕೊನೆಯ ಅವಕಾಶ, ಮುಂದೆ ಕಾಲಾವಕಾಶ ನೀಡಲಾಗುವುದಿಲ್ಲ ಎಂದು ತಾಕೀತು ಮಾಡಿ ವಿಚಾರಣೆಯನ್ನು ಜೂನ್ 14ಕ್ಕೆ ಮುಂದೂಡಿತು.
ಅರ್ಜಿಯಲ್ಲೇನಿದೆ?:ಶುದ್ಧ, ಮಾಲಿನ್ಯರಹಿತ, ಸುರಕ್ಷಿತ ಹಾಗೂ ಕೈಗೆಟುಕುವ ದರದಲ್ಲಿ ಅನಿರ್ಬಂಧಿತ ವಿದ್ಯುತ್ ಪಡೆಯುವುದು ಗೃಹ ಬಳಕೆದಾರರು ಹಕ್ಕು ಆಗಿದೆ. ಅದನ್ನು ಪೂರೈಸುವುದು ಬೆಸ್ಕಾಂನ ಜವಾಬ್ದಾರಿಯಾಗಿದೆ. ಆದರೆ ಬೆಸ್ಕಾಂನ ಅಸಾಮರ್ಥ್ಯದಿಂದಾಗಿ ಗ್ರಾಹಕರಿಗೆ ಸಾಕಷ್ಟು ತೊಂದರೆಗಳು ಆಗುತ್ತಿವೆ. ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳದ ಕಾರಣ 2015ರಿಂದ 2022ರ ವರೆಗೆ ನೂರಕ್ಕೂ ಹೆಚ್ಚು ಸಾರ್ವಜನಿಕರು ವಿದ್ಯುತ್ ಅವಘಡಗಳಿಗೆ ಪ್ರಾಣ ಕಳೆದುಕೊಂಡಿದ್ದಾರೆ. ವಿದ್ಯುತ್ ಬಳಕೆಯ ದುರ್ಬಲ ವ್ಯವಸ್ಥೆ ಯ ಕಾರಣಕ್ಕೆ ಸಾರ್ವಜನಿಕರು ಡೀಸೆಲ್ ಜನರೇಟರ್‌ಗಳನ್ನು ಹೆಚ್ಚಾಗಿ ಅವಲಂಬಿಸುವಂತಾಗಿದೆ. ಇದು ದುಬಾರಿ ವೆಚ್ಚ ಮತ್ತು ಮಾಲಿನ್ಯಕ್ಕೂ ಕಾರಣವಾಗುತ್ತಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಗೃಹ ಬಳಕೆದಾರರಿಗೆ ಶುದ್ಧ, ಮಾಲಿನ್ಯ ರಹಿತ, ಸುರಕ್ಷಿತ ಹಾಗೂ ಕೈಗೆಟಕುವ ದರದಲ್ಲಿ ಅನಿರ್ಬಂಧಿತ ವಿದ್ಯುತ್ ಪೂರೈಕೆ ಮಾಡಲು ಕ್ರಿಯಾ ಯೋಜನೆ ರೂಪಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಬೆಸ್ಕಾಂ ಸೇರಿದಂತೆ ಇಡೀ ರಾಜ್ಯದಲ್ಲಿ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಪುನರ್ ರಚಿಸುವ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು. ಇದಕ್ಕಾಗಿ ದೆಹಲಿ ಮಾದರಿಯನ್ನು ಅನುಸರಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಇದನ್ನೂಓದಿ:ಮಗುವನ್ನು ಸುಪರ್ದಿಗೆ ಪಡೆಯಲು ಆರ್ಥಿಕ ಸದೃಢತೆಯೊಂದೇ ಆಧಾರವಲ್ಲ: ತಂದೆಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್ - High Court