ಕರ್ನಾಟಕ

karnataka

ETV Bharat / state

ಹೆಚ್​ಎಂಟಿಗೆ ಕಾಯಕಲ್ಪ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ಲಾನ್​ಗಳೇನು? - Bengaluru HMT Watch Company

ಈ ಹಿಂದೆ ಭಾರಿ ಪ್ರಖ್ಯಾತಿ ಪಡೆದಿದ್ದ ಹಿಂದೂಸ್ತಾನ್ ಮೆಷಿನ್ ಟೂಲ್ಸ್ (ಹೆಚ್‌ಎಂಟಿ) ಕಂಪನಿ ಅಳಿವಿನಂಚಿನಲ್ಲಿದೆ. ವಿಶ್ವಪ್ರಸಿದ್ಧ ಹೆಚ್​​ಎಂಟಿ ವಾಚ್​ ಕಂಪನಿಗೆ ಮತ್ತೆ ಕಾಯಕಲ್ಪ ನೀಡಲು ಕೇಂದ್ರದ ಭಾರಿ ಕೈಗಾರಿಕೆ ಹಾಗೂ ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ.

HMT WATCH COMPANY
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (ETV Bharat)

By ETV Bharat Karnataka Team

Published : Sep 8, 2024, 3:45 PM IST

ಬೆಂಗಳೂರು: ಒಂದು ಕಾಲದಲ್ಲಿ ಹೆಚ್​ಎಂಟಿ ಕೈಗಡಿಯಾರ ಎಲ್ಲರ ಹೃದಯ ಬಡಿತವಾಗಿತ್ತು. ವಾಚ್ ಎಂದರೆ ಹೆಚ್​ಎಂಟಿ ಎಂದು ಥಟ್ಟನೆ ಹೇಳುವ ಕಾಲವಿತ್ತು. ಹೆಚ್​ಎಂಟಿ ವಾಚ್ ಪ್ರತಿಷ್ಠೆಯ ಸಂಕೇತವೂ ಆಗಿತ್ತು. ಆದರೆ, ಈಗ ಅದೇ ಕೈಗಡಿಯಾರ ತೆರೆಮರೆಗೆ ಸರಿಯುತ್ತಿದೆ.

ಯುವಜನರ ತಲೆಮಾರಿಗೆ ಹೆಚ್​​ಎಂಟಿ ವಾಚ್ ಎಂದರೆ ದಂತಕಥೆಯಾಗಿದೆ. ಒಂದು ಕಾಲದಲ್ಲಿ ವೈಭವಯುತವಾಗಿ ಮೆರೆದಿದ್ದ ಹಿಂದೂಸ್ತಾನ್ ಮೆಷಿನ್ ಟೂಲ್ಸ್ (ಹೆಚ್​​ಎಂಟಿ) ಕಂಪನಿ ಅಳಿವಿನಂಚಿನಲ್ಲಿದೆ. ಈಗ ದುಸ್ಥಿತಿ ತಲುಪಿರುವ ಬೆಂಗಳೂರಿನ ವಿಶ್ವಪ್ರಸಿದ್ಧ ವಾಚ್ ಕಂಪನಿಗೆ ಮತ್ತೆ ಕಾಯಕಲ್ಪ ನೀಡಲು ಕೇಂದ್ರ ಬೃಹತ್‌ ಕೈಗಾರಿಕಾ ಸಚಿವಾಲಯ ಮುಂದಾಗಿದೆ.

ಭಾರತದ ಹೆಮ್ಮೆಯ ಹೆಚ್​​ಎಂಟಿ ಕಂಪನಿಯನ್ನು ಪುನಶ್ಚೇತನಗೊಳಿಸಲು ಕರ್ನಾಟಕದವರೇ ಆದ ಕೇಂದ್ರದ ಭಾರಿ ಕೈಗಾರಿಕೆ ಹಾಗೂ ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿ ಪಣ ತೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಅವರು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಇದರಲ್ಲಿ ಹೆಚ್​​ಎಂಟಿ ವಾಚ್‌ ಅನ್ನು ಉಡುಗೊರೆಯಾಗಿ ನೀಡುವಂತೆ ಕರೆ ಕೊಟ್ಟಿರುವುದೂ ಸೇರಿದೆ.

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (ETV Bharat)

ಹೆಚ್​​ಎಂಟಿ ಘಟಕಕ್ಕೆ ಭೇಟಿ: ಇತ್ತೀಚೆಗೆ ಕೇರಳದ ಕಾಲಮಸ್ಸೇರಿಯ ಹೆಚ್​​ಎಂಟಿ ಘಟಕಕ್ಕೆ ಹೆಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕಾರ್ಖಾನೆಯ ಎಲ್ಲಾ ವಿಭಾಗಗಳಿಗೆ ತೆರಳಿ ವೀಕ್ಷಿಸಿದರಲ್ಲದೆ, ಉತ್ಪಾದನೆ, ಬೇಡಿಕೆ ಇತ್ಯಾದಿ ಅಂಶಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಭವಿಷ್ಯದ ಯೋಜನೆಗಳ ಬಗ್ಗೆ ಉನ್ನತಾಧಿಕಾರಿಗಳ ಜೊತೆ ಚರ್ಚೆ ನಡೆಸಿ, ಯಂತ್ರೋಪಕರಣಗಳ ಕ್ಷಮತೆ, ಕಾರ್ಮಿಕರ ಸ್ಥಿತಿಗತಿಗಳು, ಆಡಳಿತ ವ್ಯವಸ್ಥೆ ಇತ್ಯಾದಿಗಳ ಬಗ್ಗೆ ಮಾಹಿತಿ ಪಡೆದು ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇಂಡಿಯಾ ಹಾಗೂ ಆತ್ಮನಿರ್ಭರ್ ಭಾರತ್ ಪರಿಕಲ್ಪನೆ ಅಡಿಯಲ್ಲಿ ಕೈಗಾರಿಕಾ ಉತ್ಪಾದನೆ ಹೆಚ್ಚಳದ ಮೂಲಕ ಜಿಡಿಪಿ ವೃದ್ಧಿಗೆ ವೇಗ ಕೊಡುವುದು, ಆ ಮೂಲಕ ಭಾರತವನ್ನು ಜಗತ್ತಿನ ಮೂರನೇ ಬೃಹತ್ ಆರ್ಥಿಕ ಶಕ್ತಿಯನ್ನಾಗಿ ರೂಪಿಸುವ ಕನಸನ್ನು ಈಡೇರಿಸುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕಿದೆ. ಆ ನಿಟ್ಟಿನಲ್ಲಿ ನಾವು ಕ್ಷಮತೆ, ದಕ್ಷತೆಯಿಂದ ಕೆಲಸ ಮಾಡಬೇಕು ಎಂದು ಅಧಿಕಾರಿಗಳು, ಕಾರ್ಮಿಕರಿಗೆ ಹೆಚ್​​ಡಿಕೆ ಮಾರ್ಗದರ್ಶನ ಮಾಡಿದ್ದಾರೆ.

ಭಾರತದ ಹೆಮ್ಮೆಯ ಕಾರ್ಖಾನೆಗಳಲ್ಲಿ ಒಂದಾಗಿದ್ದ ಹೆಚ್​ಎಂಟಿ ಕಾರ್ಖಾನೆಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಪ್ರಧಾನಿಗಳ ಮಾರ್ಗದರ್ಶನದಲ್ಲಿ ಎಲ್ಲಾ ರೀತಿಯ ಮಾರ್ಗೋಪಾಯಗಳನ್ನು ಹುಡುಕಲಾಗುತ್ತಿದೆ. ಈಗಾಗಲೇ ನಾನು ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿರುವ ಹೆಚ್​ಎಂಟಿ ಘಟಕಗಳಿಗೆ ಭೇಟಿ ನೀಡಿದ್ದೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಹೆಚ್​ಎಂಟಿ ಕಂಪನಿಯು ಕಳೆದುಹೋದ ವೈಭವವನ್ನು ಮರುಕಳಿಸುವಂತೆ ಮಾಡಲು ಮುಂದಾಗಿರುವ ಕುಮಾರಸ್ವಾಮಿ, ಈಗಾಗಲೇ ಬೆಂಗಳೂರು, ಹೈದರಾಬಾದ್, ಅಜ್ಮೀರ್‌ ಹಾಗೂ ಕೇರಳದ ಹೆಚ್​ಎಂಟಿಯ ಎಲ್ಲ ಘಟಕಗಳಿಗೆ ಭೇಟಿ ನೀಡಿದ್ದಾರೆ. ಪ್ರಧಾನಿ ಮೋದಿಗೆ ಹೆಚ್​ಎಂಟಿ ವಾಚ್​ಗಳನ್ನು ಉಡುಗೊರೆಯಾಗಿ ನೀಡಲು ಕುಮಾರಸ್ವಾಮಿ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (ETV Bharat)

ಸದ್ಯಕ್ಕೆ ವಾಚ್​​ಗಳಲ್ಲದೆ, ರಕ್ಷಣಾ ಇಲಾಖೆಗೆ, ಬಾಹ್ಯಾಕಾಶ ಯೋಜನೆಗಳಿಗೆ ಹೆಚ್‌ಎಂಟಿ ಪರಿಕರಗಳನ್ನು ತಯಾರಿಸಿ ಕೊಡುತ್ತಿದೆ. ದೇಶದ ಉದ್ದಗಲಕ್ಕೂ ಕಂಪನಿಯ ಉತ್ಪಾದನಾ ಘಟಕಗಳು ಇದ್ದರೂ ಕಂಪನಿಯ ಕ್ಷಮತೆ ಕಡಿಮೆಯಾಗಿದೆ. ಜೊತೆಗೆ ಹೆಚ್‌ಎಂಟಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ನಷ್ಟದ ಜೊತೆಗೆ ಆರ್ಥಿಕ ಬಿಕ್ಕಟ್ಟು, ನ್ಯಾಯಾಲಯಗಳಲ್ಲಿ ಮೊಕದ್ದಮೆ ಇತ್ಯಾದಿ ಸಂಕಷ್ಟಗಳನ್ನು ಎದುರಿಸುತ್ತಿದೆ. ಇದಕ್ಕೆ ಕೇಂದ್ರದ ನೆರವನ್ನೂ ಯಾಚಿಸಲಾಗಿದೆ.

ಅಧಿಕಾರಿಗಳೊಂದಿಗೆ ಸಭೆ:ಈ ಸಂಬಂಧ ಇತ್ತೀಚೆಗೆ ಬೆಂಗಳೂರಿನಲ್ಲಿ ಹೆಚ್‌ಎಂಟಿ ಕಂಪನಿಯ ಉನ್ನತ ಅಧಿಕಾರಿಗಳ ಸಭೆ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ, ಹೆಚ್‌ಎಂಟಿ ಪುನರುತ್ಥಾನದ ಬಗ್ಗೆ ವಿವರವಾಗಿ ಚರ್ಚಿಸಿದರು. ಕಂಪನಿಯ ಕಾರ್ಯ ಚಟುವಟಿಕೆ ಬಗ್ಗೆ ಪ್ರಾತ್ಯಕ್ಷಿಕೆ ವೀಕ್ಷಿಸಿ ಸಮಗ್ರ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಹೆಚ್‌ಎಂಟಿ ವಹಿವಾಟು, ನಿವ್ವಳ ಲಾಭ ಇತ್ಯಾದಿಗಳ ಬಗ್ಗೆ ಮಾಹಿತಿ ಪಡೆದ ಸಚಿವ ಕುಮಾರಸ್ವಾಮಿ, ಕಂಪನಿಯ ಆರ್ಥಿಕತೆ, ಉತ್ಪಾದನೆ, ಇನ್ನಿತರ ಸ್ಥಿತಿಗತಿಗಳ ಕುರಿತು ಚರ್ಚಿಸಿದರು.

ಶೀಘ್ರ ಒಳ್ಳೆಯ ಸುದ್ದಿ ಕೊಡುತ್ತೇನೆ: "ಪ್ರಧಾನಿಯವರ ಮಾರ್ಗದರ್ಶನದಲ್ಲಿ ನಾನು ನನ್ನ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದೇನೆ. ಒಂದು ವಿಚಾರದಲ್ಲಿ ಶೀಘ್ರವೇ ಒಳ್ಳೆಯ ಸುದ್ದಿ ಕೊಡಲಿದ್ದೇನೆ. ಅದು ಯಾವುದು? ಯಾವಾಗ? ಎಂದು ಈಗಲೇ ಹೇಳಲಾರೆ. ಅದು ಯಶಸ್ವಿಯಾದರೆ ಪ್ರಧಾನಿಗೂ ನಂಬಿಕೆ ಬರುತ್ತದೆ. ಆಮೇಲೆ ಉಳಿದ ಕಾರ್ಖಾನೆಗಳು ಹಂತ-ಹಂತವಾಗಿ ಸರಿ ಹೋಗುತ್ತವೆ. ಆ ಪ್ರಯತ್ನದಲ್ಲಿ ನಾನು ಇದ್ದೇನೆ. ಇನ್ನು ಕೆಲ ದಿನಗಳಲ್ಲಿ ಶುಭ ಸುದ್ದಿ ಹೇಳಲಿದ್ದೇನೆ" ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಹೆಚ್‌.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾದ ಬಳಿಕ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ಬಾಬು ಅವರಿಗೆ ಹೆಚ್​ಎಂಟಿ ಕೈಗಡಿಯಾರವನ್ನು ಉಡುಗೊರೆಯಾಗಿ ನೀಡಿದ್ದರು. ಉಡುಗೊರೆಯಾಗಿ ನೀಡಲು ಹೆಚ್‌ಎಂಟಿ ವಾಚ್‌ ಅನ್ನೇ ಆಯ್ಕೆ ಮಾಡಿ ಎಂದು ಕುಮಾರಸ್ವಾಮಿ ಕರ್ನಾಟಕದ ಸಂಸದರಿಗೆ ಕರೆಕೊಟ್ಟಿದ್ದಾರೆ. ಗೌರಿ ಗಣೇಶ ಹಬ್ಬದ ಪ್ರಯುಕ್ತ ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಗೂ ಹೆಚ್‌ಎಂಟಿ ವಾಚ್ ಉಡುಗೊರೆಯಾಗಿ ನೀಡಿದ್ದಾರೆ.

ಇದನ್ನೂ ಓದಿ:'ನಿಮ್ಮ ಆಸ್ತಿಗಳ ಮೌಲ್ಯ ಹೆಚ್ಚು ಮಾಡುತ್ತೇನೆ, ಮಾರಬೇಡಿ': ಕನಕಪುರ ಜನರಿಗೆ ಡಿಸಿಎಂ ಡಿಕೆಶಿ ಮನವಿ - increase property value

ABOUT THE AUTHOR

...view details