ಬೆಂಗಳೂರು: ''ಕೇಂದ್ರದ ಸಚಿವರಿಗೆ ನಮ್ಮ ರಾಜ್ಯದ ಅಧಿಕಾರಿಗಳ ಜೊತೆ ಸಭೆ ಮಾಡುವ ಅವಕಾಶ ಇಲ್ಲ'' ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು. ಸದಾಶಿವನಗರ ನಿವಾಸದ ಬಳಿ ಮಾಧ್ಯಮದವರೊಂದಿಗೆ ಹಲವು ವಿಚಾರಗಳ ಬಗ್ಗೆ ಮಾತನಾಡುವ ವೇಳೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಜನತಾ ದರ್ಶನಕ್ಕೆ ಅಧಿಕಾರಿಗಳು ಗೈರು ವಿಚಾರವಾಗಿ ಪ್ರತಿಕ್ರಿಯಿಸಿದರು.
ರಾಜ್ಯದಲ್ಲಿ ಯಾರೇ ಸಿಎಂ ಇದ್ದರೂ ಶಿಷ್ಟಾಚಾರ ಉಲ್ಲಂಘನೆ ಆಗದಂತೆ ನೋಡಿಕೊಳ್ಳಿ ಎಂದು ಹೇಳುತ್ತಾರೆ. ಕೇಂದ್ರದ ಸಚಿವರಿಗೆ ನಮ್ಮ ಅಧಿಕಾರಿಗಳ ಜೊತೆ ಸಭೆ ನಡೆಸುವ ಅವಕಾಶ ಇಲ್ಲ. ಈ ವಿಚಾರ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರಿಗೂ ಸಹ ಗೊತ್ತಿದೆ. ದಿಶಾ ಕಾರ್ಯಕ್ರಮದಡಿ ಸಭೆ ನಡೆಸಿ ಕೆಲ ಸೂಚನೆಗಳನ್ನು ನೀಡಬಹುದಷ್ಟೇ ಎಂದು ತಿಳಿಸಿದ ಗೃಹ ಸಚಿವರು, ಆಗ ಡಿ.ಕೆ. ಸುರೇಶ್ ಕರೆದಾಗ ಕೆಲ ಅಧಿಕಾರಿಗಳು ಮಾತ್ರ ಹೋಗುತ್ತಿದ್ದರು ಎಂದು ಸಮರ್ಥಿಸಿಕೊಂಡರು.
ಅಗತ್ಯ ಬಿದ್ದರೆ ವಿಚಾರಣೆ: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ಮಾಜಿ ಸಚಿವ ನಾಗೇಂದ್ರ, ಶಾಸಕ ಬಸನಗೌಡ ದದ್ದಲ್ ವಿಚಾರಣೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ತನಿಖೆಗೆ ಅವಶ್ಯಕತೆ ಇರುವವರನ್ನು ಕರೆಯುತ್ತಾರೆ. ಎಸ್ಐಟಿ ಅವರು ಪಿಎಗಳನ್ನು ಕರೆತಂದು ವಿಚಾರಣೆ ನಡೆಸಿದ್ದಾರೆ. ಅದಾದ ಮೇಲೆ ಅಗತ್ಯ ಬಿದ್ದರೆ ನಾಗೇಂದ್ರ, ದದ್ದಲ್ ಅವರನ್ನು ಕರೆಯುತ್ತಾರೆ ಎಂದರು.