ಬೆಂಗಳೂರು :9 ಹೊಸ ಸಾಲಿನ ಯೋಜನೆಗಳು ಮತ್ತು 5 ದ್ವಿಪಥಿಕರಣಗೊಳಿಸುವ ಯೋಜನೆಗಳು ಸೇರಿದಂತೆ 14 ಮಹತ್ವದ ಯೋಜನೆಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳಬೇಕು. ಈ ಯೋಜನೆಗಳು ಒಟ್ಟು 1264 ಕಿಲೋಮೀಟರ್ ಹೊಸ ಮಾರ್ಗ ಮತ್ತು 707 ಕಿಲೋಮೀಟರ್ ದ್ವಿಪಥಿಕರಣಗೊಳಿಸುವಿಕೆಯನ್ನು ಒಳಗೊಂಡಿದೆ. ಸದ್ಯ 289 ಕಿಲೋಮೀಟರ್ ಹೊಸ ಮಾರ್ಗ ಮತ್ತು 502 ಕಿಲೋಮೀಟರ್ ಡಬ್ಲಿಂಗ್ ಲೈನ್ ಈಗಾಗಲೇ ಯಶಸ್ವಿಯಾಗಿ ಕಾರ್ಯಾರಂಭಗೊಂಡಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ಕರ್ನಾಟಕ ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚಿಸಲು ಬೆಂಗಳೂರಿನಲ್ಲಿ ರೈಲ್ವೆ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೊಟ್ಗಿ - ಕೂಡಗಿ - ಗದಗ, ಯಶವಂತಪುರ - ಚನ್ನಸಂದ್ರ, ಬೈಯಪ್ಪನಹಳ್ಳಿ - ಹೊಸೂರು, ಬೆಂಗಳೂರು - ವೈಟ್‌ಫೀಲ್ಡ್, ಹೊಸಪೇಟೆ - ಹುಬ್ಬಳ್ಳಿ - ಲೋಂಡಾ - ತಿನೈಘಾಟ್ - ವಾಸ್ಕೋ ಡ ಗಾಮಾ ಸೇರಿದಂತೆ 9 ಒಂಬತ್ತು ಹೊಸ ಸಾಲಿನ ಯೋಜನೆಗಳಿವೆ.
ಇನ್ನು ತುಮಕೂರು - ಕಲ್ಯಾಣದುರ್ಗ ಮೂಲಕ ರಾಯದುರ್ಗ, ತುಮಕೂರು - ಚಿತ್ರದುರ್ಗ - ದಾವಣಗೆರೆ, ಗಿಣಿಗೇರಾ-ರಾಯಚೂರು, ಬಾಗಲಕೋಟೆ-ಕುಡಚಿ, ಗದಗ - ವಾಡಿ, ಕಡೂರು - ಚಿಕ್ಕಮಗಳೂರು, ಶಿವಮೊಗ್ಗ ಶಿಕಾರಿಪುರ - ರಾಣೆಬೆನ್ನೂರು, ಬೆಳಗಾವಿ - ಕಿತ್ತೂರು ಮಾರ್ಗವಾಗಿ ಧಾರವಾಡ, ಹಾಸನ - ಬೇಲೂರು ರೈಲ್ವೆ ಅಭಿವೃದ್ಧಿ ಯೋಜನೆಗಳನ್ನು ತ್ವರಿತಗೊಳಿಸಲು ರೈಲ್ವೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಮತ್ತು ಕೆ- ರೈಡ್ ಸೇರಿದಂತೆ ವಿವಿಧ ಮಧ್ಯಸ್ಥಗಾರರ ನಡುವಿನ ಸಹಯೋಗದ ಅಗತ್ಯವಿದೆ ಎಂದು ಒತ್ತಿ ಹೇಳಿದರು.