ಬೆಂಗಳೂರು: ''ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕರ್ನಾಟಕದ ವಿಕಾಸಕ್ಕೆ ಆದ್ಯತೆ ನೀಡುತ್ತಿದ್ದೇವೆ. ಈಗಾಗಲೇ ಬಿಡುಗಡೆ ಮಾಡಿರುವ ಅನುದಾನದ ಸದ್ಬಳಕೆ ಆಗಬೇಕಿದೆ'' ಎಂದು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ಬೆಂಗಳೂರಿಗೆ ಬಂದಿರುವ ಕೇಂದ್ರ ಸಚಿವರು ಇಂದು ಕುಮಾರಕೃಪಾ ಅತಿಥಿಗೃಹದಲ್ಲಿ ರಾಜ್ಯದ ಕೃಷಿ, ಗ್ರಾಮೀಣಾಭಿವೃದ್ಧಿ, ಕಂದಾಯ ಸಚಿವರ ಜೊತೆ ಕೇಂದ್ರ ಸರ್ಕಾರದ ಯೋಜನೆಗಳ ಸಾಧನೆಯನ್ನು ಪರಿಶೀಲಿಸಿದರು. ನಂತರ ಮಾತನಾಡಿದ ಅವರು, ''ಅನುದಾನ ಕೇಳದೇ ಇದ್ದರೂ ನಾವೇ ಘೋಷಣೆ ಮಾಡಿದ್ದೇವೆ. ಬಹಳಷ್ಟು ಅನುದಾನವನ್ನು ಈಗಾಗಲೇ ಕೊಟ್ಟಿದ್ದು, ಅದನ್ನು ಇನ್ನೂ ಕರ್ನಾಟಕ ಸರ್ಕಾರ ಖರ್ಚು ಮಾಡಿಲ್ಲ'' ಎಂದರು.
''ಪ್ರತಿ ಬಡವನಿಗೂ ಮನೆ ಸಿಗಬೇಕು ಎಂಬುದು ಮೋದಿಯವರ ಸಂಕಲ್ಪ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕಳೆದ ಸೆಪ್ಟೆಂಬರ್ನಲ್ಲಿ ಕರ್ನಾಟಕಕ್ಕೆ 2,57,246 ಮನೆಗಳ ನಿರ್ಮಾಣಕ್ಕೆ ಒಪ್ಪಿಗೆ ಕೊಟ್ಟಿದ್ದೆವು. ಅನುದಾನವನ್ನೂ ನೀಡಿದ್ದೆವು. ಇಂದು ಮತ್ತೆ ಕರ್ನಾಟಕದ ಬಡಜನರಿಗೆ ಮನೆ ಕಟ್ಟಲು ಇರುವ ಗುರಿ ಹೆಚ್ಚಿಸಲಾಗಿದೆ. ಇಂದು 4,67,580 ಮನೆಗಳನ್ನು ಕಟ್ಟಲು ಒಪ್ಪಿಗೆ ಕೊಟ್ಟಿದ್ದೇವೆ. ಬಡವರ ಸೇವೆಯೇ ಭಗವಂತನ ಸೇವೆ ಎಂಬ ಚಿಂತನೆ ನಮ್ಮದು. ಎಲ್ಲ ಬಡವರಿಗೆ ಮನೆ ನಿರ್ಮಿಸಿ ಕೊಡುವ ಉದ್ದೇಶ ಈಡೇರಿಸಬೇಕಿದೆ. ಅದಕ್ಕಾಗಿ ಮನೆಗಳ ನಿರ್ಮಾಣ ಕಾರ್ಯಕ್ಕೆ ವೇಗ ಕೊಡಲು ಸೂಚಿಸಲಾಗಿದೆ. ಹಿಂದೆ ನೀಡಿದ್ದ ಅನುದಾನ ಪೂರ್ತಿ ಬಳಕೆ ಮಾಡಲು ತಿಳಿಸಲಾಗಿದೆ'' ಎಂದು ವಿವರಿಸಿದರು.
''ಆತ್ಮ ಯೋಜನೆಯಡಿ ಹೆಚ್ಚುವರಿ ಸಿಬ್ಬಂದಿ ನೀಡಲು ಒಪ್ಪಿಗೆ ಕೊಡಲಾಗಿದೆ. ವಿಕಸಿತ ಭಾರತ ನಿರ್ಮಾಣದ ಸಂಕಲ್ಪ ನಮ್ಮದು. ವಿಕಸಿತ ಭಾರತಕ್ಕಾಗಿ ವಿಕಸಿತ ಕರ್ನಾಟಕ ಎಂಬುದು ನಮ್ಮ ಚಿಂತನೆ. ರಾಜ್ಯ ಸರ್ಕಾರವು ಸಕಾಲದಲ್ಲಿ ಅನುದಾನವನ್ನು ಬಳಸಿ, ಬಳಕೆ ಸಂಬಂಧಿತ ದೃಢಪತ್ರ ಕಳಿಸಬೇಕು'' ಎಂದು ಸೂಚಿಸಿದರು.
''ಆರೋಪ, ಪ್ರತ್ಯಾರೋಪದ ರಾಜಕಾರಣ ನಮ್ಮದಲ್ಲ, ನಮ್ಮದು ವಿಕಾಸ, ಅಭಿವೃದ್ಧಿಯ ರಾಜಕಾರಣ'' ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಶಿವರಾಜ್ ಸಿಂಗ್ ಚೌಹಾಣ್, ''ಹಲವು ಯೋಜನೆಗಳಲ್ಲಿ ಕರ್ನಾಟಕವು ಅನುದಾನ ಖರ್ಚು ಮಾಡಿಲ್ಲ'' ಎಂದು ತಿಳಿಸಿದರು.
ರಾಜ್ಯದಲ್ಲಿ ಕೃಷಿ ಬಲವರ್ಧನೆ ನೆರವಿಗೆ ಮನವಿ, ಕೇಂದ್ರದ ಸಮ್ಮತಿ:ಇದೇ ವೇಳೆ,ರಾಜ್ಯದ ಕೃಷಿ ಕ್ಷೇತ್ರದ ಬಲವರ್ಧನೆ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಪೂರಕವಾಗಿ ಬೇಕಾಗಿರುವ ವಿವಿಧ ಸಹಾಯ ಮತ್ತು ಆರ್ಥಿಕ ಸಹಕಾರವನ್ನು ಶೀಘ್ರ ಒದಗಿಸುವಂತೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಕೇಂದ್ರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ನೆರವಿನ ಭರವಸೆಯನ್ನೂ ಸಹ ಪಡೆದಿದ್ದಾರೆ.
ಕುಮಾರಕೃಪಾ ಅತಿಥಿಗೃಹದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದ ಚಲುವರಾಯಸ್ವಾಮಿ, ರಾಜ್ಯದ ಬೇಡಿಕೆಗಳನ್ನು ಮಂಡಿಸಿದರು. ರಾಜ್ಯದಲ್ಲಿ ಕೃಷಿ ಇಲಾಖೆ ಶೇ.99ರಷ್ಟು ಆರ್ಥಿಕ ಹಾಗೂ ಭೌತಿಕ ಗುರಿ ಸಾಧನೆ ಮಾಡಿದ್ದು, ಕೇಂದ್ರ ಪುರಸ್ಕೃತ ಯೋಜನೆಗಳಲ್ಲೂ ಶೇ.124ರಷ್ಟು ಅನುದಾನ ಬಳಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯೂ ಇದೇ ರೀತಿ ಹಣಕಾಸಿನ ನೆರವು ಒದಗಿಸಬೇಕು ಎಂದು ಸಚಿವರು ಕೋರಿದರು. ಕೇಂದ್ರ ಕೃಷಿ ಸಚಿವರು ಇದಕ್ಕೆ ಮುಕ್ತ ಮನಸ್ಸಿನ ಸಮ್ಮತಿ ಸೂಚಿಸಿದರು.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಿಂದ ರೈತರಿಗೆ ಕೃಷಿ ಯಾಂತ್ರಿಕರಣಕ್ಕೆ ಹೆಚ್ಚಿನ ಅನುಕೂಲವಾಗುತ್ತಿದ್ದು, ಈ ಬಾರಿ ಇನ್ನಷ್ಟು ಅಧಿಕ ಆರ್ಥಿಕ ನೆರವು ಒದಗಿಸುವಂತೆ ಮನವಿ ಮಾಡಿದ ಅವರು ಆನೇಕಲ್ ತಾಲೂಕಿನ, ಕಾಚನಾಯಕನಹಳ್ಳಿ ಗ್ರಾಮದಲ್ಲಿ ಗುರುತಿಸಲಾಗಿರುವ 20 ಎಕರೆ ಪ್ರದೇಶದಲ್ಲಿ ಪೆಸ್ಟಿಸೈಡ್ಸ್ ಫಾರ್ಮುಲೇಷನ್ ಟೆಕ್ನಾಲಜಿ ಸಂಸ್ಥೆ ಪ್ರಾರಂಭಕ್ಕೆ ಅನುಮೋದನೆ ಒದಗಿಸುವಂತೆ ಕೋರಿದರು.