ಮೈಸೂರು: ಭಾರತದಲ್ಲಿನ ಪ್ರತಿಯೊಂದು ರಾಜ್ಯವು ತನ್ನದೆಯಾದ ವಿಭಿನ್ನ ಸಂಸ್ಕೃತಿ, ಭಾಷೆ ಹಾಗೂ ಸಂಗೀತದ ಪರಂಪರೆ ಹೊಂದಿದ್ದು, ಪ್ರತಿಯೊಂದು ದೇಶದ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿವೆ ಹಾಗೂ ಸಂಗೀತ ಕ್ಷೇತ್ರಕ್ಕೆ ಮೈಸೂರಿನ ಕೊಡುಗೆ ಅಪಾರ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಪ್ರವಾಸೋದ್ಯಮ ಸಚಿವಾಲಯದ ವತಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಘಟಿಕೋತ್ಸವ ಸಭಾಂಗಣದಲ್ಲಿ ಇಂದು ನಡೆದ ''ಮೈಸೂರು ಸಂಗೀತ ಸುಗಂಧ ಉತ್ಸವ''ದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತದ ಸಂಗೀತ ಪರಂಪರೆಗೆ ಕರ್ನಾಟಕ ಸಂಗೀತದ ಕೊಡುಗೆ ಮಹತ್ವವಾಗಿದ್ದು, ಜಾತಿ, ಧರ್ಮ ಹಾಗೂ ಭಾಷೆ ಮೀರಿ ಇಂದು ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದಿದೆ ಎಂದು ಮೈಸೂರಿನ ಕೊಡುಗೆಯನ್ನು ಕೊಂಡಾಡಿದರು.
ಸಂಗೀತ ಕ್ಷೇತ್ರದಲ್ಲಿ ವಿಜಯನಗರ ಸಾಮ್ರಾಜ್ಯದ ಪಾತ್ರ:ಇಂದು ಸಂಗೀತ ಸುಗಂಧ ಕಾರ್ಯಕ್ರಮವನ್ನು ಮೈಸೂರಿನಲ್ಲಿ ಆಯೋಜಿಸಿರುವ ಮುಖ್ಯ ಉದ್ದೇಶ, ಇಲ್ಲಿನ ವಿಜಯನಗರ ಸಾಮ್ರಾಜ್ಯದಂತಹ ರಾಜ ಮನೆತನಗಳ ಒಡೆಯರು ಸಂಗೀತಕ್ಕೆ ಹಾಗೂ ಅದರ ಬೆಳವಣಿಗೆಗೆ ನೀಡುರುವ ಪ್ರೋತ್ಸಾಹವೇ ಕಾರಣ. ಅಲ್ಲದೇ ಮೈಸೂರು ಸಂಗೀತದ ನಾಡು, ಹಾಗೆಯೇ ಚಂದನದ ನಾಡು ಆಗಿದೆ. ಹಾಗಾಗಿ ಇಂತಹ ಉತ್ತಮ ಕಾರ್ಯಕ್ರಮ ಆಯೋಜಿಸಿ ಆ ಕಾರ್ಯಕ್ರಮದಲ್ಲಿ ದಾಸ ಸಂಗೀತದ ಬಗ್ಗೆ ಮಾತಾಡವುದು ಹೆಮ್ಮೆಯ ವಿಷಯ ಎಂದು ಹೇಳಿದರು.
12ನೇ ಮತ್ತು 16ನೇ ಶತಮಾನದ ನಡುವೆ, ವಿಜಯನಗರ ಸಾಮ್ರಾಜ್ಯದ ಆಶ್ರಯದಲ್ಲಿ ಕರ್ನಾಟಕ ಸಂಗೀತವು ಪ್ರವರ್ಧಮಾನಕ್ಕೆ ಬಂದಿತು. ಈ ಸಮಯದಲ್ಲಿ "ಕರ್ನಾಟಿಕ್ ಸಂಗೀತದ ಪಿತಾಮಹ" ಎಂದು ಕರೆಯಲ್ಪಡುವ ಸಂತ ಪುರಂದರದಾಸರು ಲಕ್ಷಾಂತರ ಕೀರ್ತನೆಗಳು, ಭಕ್ತಿಗೀತೆಗಳನ್ನು ರಚಿಸಿದ್ದಾರೆ. ಕರ್ನಾಟಕ ಸಂಗೀತದ ಮೂಲಭೂತ ಪಾಠಗಳನ್ನು ಸಹ ರೂಪಿಸಿದ್ದಾರೆ. 18ನೇ ಶತಮಾನವನ್ನು ಕರ್ನಾಟಕ ಸಂಗೀತದ ಸುವರ್ಣಯುಗವೆಂದು ಪರಿಗಣಿಸಬಹುದು. ಪುರಂದರ ದಾಸರ ನಂತರ ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತರ್ ಮತ್ತು ಶ್ಯಾಮ ಶಾಸ್ತ್ರಿ ಈ ಮೂವರು ಸಂಯೋಜಕರು ಸಮಕಾಲೀನರಾಗಿದ್ದರು. ಅವರ ಸಂಯೋಜನೆಗಳಿಂದ ಕರ್ನಾಟಿಕ್ ಸಂಗೀತ ಸಂಗ್ರಹವನ್ನು ಶ್ರೀಮಂತಗೊಳಿಸಿದರು. ಅವರು ಮಧುರ ಸೌಂದರ್ಯ, ಲಯಬದ್ಧ ಮತ್ತು ಭಕ್ತಿಯ ಉತ್ಸಾಹಕ್ಕೆ ಹೆಸರುವಾಸಿಯಾಗಿದ್ದಾರೆ ಎಂದರು.
ಸಂಗೀತ ಪರಂಪರೆ:ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ಇಲಾಖೆಯ ರಾಜ್ಯ ಸಚಿವ ಸುರೇಶ್ ಗೋಪಿ ಮಾತನಾಡಿ, ಕಳೆದ ಬಾರಿ ಆಂಧ್ರ ಪ್ರದೇಶದಲ್ಲಿ ಈ ರೀತಿಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವರ್ಷ ಕರ್ನಾಟಕದ ಮೈಸೂರಿನಲ್ಲಿ ಮಾಡಲಾಗುತ್ತಿದೆ. ಕರ್ನಾಟಕ ತೆಲಂಗಾಣ, ಕೇರಳ ಹಾಗೂ ಇನ್ನಿತರ ರಾಜ್ಯಗಳು ತನ್ನದೇ ಆದ ಸಂಗೀತ ಪರಂಪರೆಯನ್ನು ಹೊಂದಿದ್ದು, ಕರ್ನಾಟಕದ ದಾಸ ಸಂಗೀತವು ದೇಶದಾದ್ಯಂತ ಪ್ರಸಿದ್ಧಿ ಪಡೆದಿದೆ ಎಂದು ಹೇಳಿದರು.
ಕರ್ನಾಟಿಕ್ ಸಂಗೀತದ ಪ್ರಭಾವ:ಭಾರತೀಯ ಚಿತ್ರರಂಗದಲ್ಲಿ ಕರ್ನಾಟಿಕ್ ಸಂಗೀತದ ಪ್ರಭಾವ ನೋಡುವುದಾದರೆ ಶಂಕರನ್, ಎಸುದಾಸ್ ಅವರ ಅವರು ಕೊಡುಗೆ ಅಪಾರ. ಕರ್ನಾಟಿಕ್ ಸಂಗೀತದ ಬಗ್ಗೆ ಅರಿವೇ ಇಲ್ಲದ ಎಸ್ಪಿಬಿ ಅವರು ಕರ್ನಾಟಿಕ್ ಸಂಗೀತದ ಲೋಕದಲ್ಲಿ ಮಾಡಿದ ಸಾಧನೆ ಅವಿಸ್ಮರಣೀಯ. ಎಸ್ ಜಾನಕಿ, ಸುಶೀಲ, ಕೆಎಸ್ ಚಿತ್ರ, ಜಯಚಂದ್ರನ್ ಸೇರಿದಂತೆ ಹಲವಾರು ಸಂಗೀತಾ ದಿಗ್ಗಜರರು ಕರ್ನಾಟಿಕ್ ಸಂಗೀತದಲ್ಲಿ ಪರಿಣಿತರಾಗಿದ್ದು, ಅವರು ಚಿತ್ರರಂಗಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಇನ್ನೂ ಮಲಯಾಳಂ ಸಿನಿಮಾದಲ್ಲಿ ಕರ್ನಾಟಿಕ್ ಸಂಗೀತವು ಒಂದು ಅಲೆಯನ್ನೇ ಸೃಷ್ಟಿ ಮಾಡಿತ್ತು ಎಂದು ಕರ್ನಾಟಿಕ್ ಸಂಗೀತದ ಕೊಡುಗೆಯನ್ನು ಸುರೇಶ್ ಗೋಪಿ ಇದೇ ವೇಳೆ ವರ್ಣಿಸಿದರು.