ಬೆಂಗಳೂರು: ದಾಖಲೆ ಕೊಡಿ.. ದಾಖಲೆ ಕೊಡಿ ಎನ್ನುತ್ತಿದ್ದೀರಿ. ಇಲ್ನೋಡಿ ಸನ್ಮಾನ್ಯ ಸಿದ್ದರಾಮಯ್ಯನವರೇ.. ನಿಮ್ಮ ಖೊಟ್ಟಿ ಗ್ಯಾರಂಟಿ ಸರ್ಕಾರದ ಲೂಟಿ ಸಾಕ್ಷಿಗುಡ್ಡೆ. ಪತ್ರಿಕೆಯವರೇ ನಿಮ್ಮ ಸಾಕ್ಷಿಗುಡ್ಡೆಯ ಸಾಕ್ಷಾತ್ಕಾರ ಮಾಡಿಸಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ನಿಮ್ಮ ಸರ್ಕಾರ ಗುತ್ತಿಗೆದಾರರನ್ನು ಎಷ್ಟು ನಿರ್ಲಜ್ಜವಾಗಿ ಸುಲಿಗೆ ಮಾಡುತ್ತಿದೆ ಎನ್ನುವುದಕ್ಕೆ ಈ ಸಾಕ್ಷಿಗುಡ್ಡೆ ಸಾಕ್ಷ್ಯ ಸಾಲದೇ ಮುಖ್ಯಮಂತ್ರಿಗಳೇ?. ಚೆಂಬು ಹಾಕಿ ಹಂಡೆ ಹೊಡೆದರು ಎನ್ನುವಂತೆ ಗ್ಯಾರಂಟಿ ಹೆಸರಿನಲ್ಲಿ ಬಿಡಿಗಾಸು ಕೊಟ್ಟು ಕೋಟಿ ಕೋಟಿ ಲೂಟಿ ಮಾಡುತ್ತಿದ್ದೀರಿ, ಗುತ್ತಿಗೆದಾರರ 32,000 ಕೋಟಿಯಷ್ಟು ಬಿಲ್ ಬಾಕಿ ಬಿದ್ದಿದೆ. ಈ ಬಾಕಿ ಮೇಲೆ ನಿಮ್ಮ ಪರ್ಸಂಟೇಜ್ ಕರಿನೆರಳು ಕೂಡ ಬಿದ್ದಿದೆ. ಸಾಲಸೋಲ ಮಾಡಿ ಕಾಮಗಾರಿ ಮಾಡಿರುವ ಗುತ್ತಿಗೆದಾರರು ದಯಾಮರಣಕ್ಕೆ ಅರ್ಜಿ ಬರೆಯುತ್ತಿದ್ದಾರೆ ಎಂದು ಟೀಕಿಸಿದ್ದಾರೆ.