ರಾಮನಗರ: ನಾನು ನಿಮ್ಮದನ್ನು ಬಿಚ್ಚಲು ಹೋದರೆ ಪುಟಗಟ್ಟಲೆ ಇದೆ. ಆ ಹೆಣ್ಣುಮಗಳನ್ನು ಕಿಡ್ನಾಪ್ ಮಾಡಿ ಬೆದರಿಸಿ ಅವರಪ್ಪನಿಂದ ಸದಾಶಿವನಗರದಲ್ಲಿ ನಿವೇಶನ ಬರೆಸಿಕೊಂಡಿದ್ದೀರಿ. ಆ ಹೆಣ್ಣುಮಗಳನ್ನು ಕಿಡ್ನ್ಯಾಪ್ ಮಾಡಿ ಬೆದರಿಕೆ ಹಾಕಿದ್ದು ನೀವೇ ಅಲ್ಲವೇ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಡದಿಯಲ್ಲಿಂದು ಮೈಸೂರು ಚಲೋ ಎರಡನೇ ದಿನದ ಪಾದಯಾತ್ರೆಗೆ ಚಾಲನೆ ಕೊಟ್ಟು ಬಳಿಕ ಬಹಿರಂಗ ಸಭೆಯಲ್ಲಿ ಭಾಷಣ ಮಾಡಿದ ಅವರು, ಅದೇನೋ ಬಿಚ್ತೀನಿ ಅಂದ್ಯಲ್ಲಪ್ಪ, ಬಿಚ್ಚು ನೋಡೋಣ, ನಂದು ವಿಜಯೇಂದ್ರದ್ದು. ಆಮೇಲೆ ನಿನ್ನದನ್ನು ಹೇಗೆ ಬಿಚ್ಚುತೀನಿ ಎಂದು ನೋಡುವಿಯಂತೆ. ಏನಿದೆ ನಿಮ್ಮ ಬಳಿ ಬಿಚ್ಚಿ, ನಾನಿರೋದು ಬೀದಿಯಲ್ಲಿ, ನೀನಿರೋದು ಗಾಜಿನ ಮನೆಯಲ್ಲಿ ಎಂದು ಹರಿಹಾಯ್ದರು.
ಅಜ್ಜಯ್ಯನ ಮೇಲೆ ಪ್ರಮಾಣ ಮಾಡಿ:ನಾನು ಬಿಚ್ಚೋಕ್ಕೆ ಹೋದ್ರೆ ನಿಮ್ಮದು ಪುಟಗಟ್ಟಲೆ ಇದೆ. ಅಜ್ಜಯ್ಯನ ಬಗ್ಗೆ ಈ ಡಿ.ಕೆ.ಶಿವಕುಮಾರ್ಗೆ ಭಕ್ತಿ ಗೌರವ ಇದ್ದರೆ ಪ್ರಮಾಣ ಮಾಡಲಿ. ಅಜ್ಜಯ್ಯನ ಬಗ್ಗೆ ನನಗೆ ಗೌರವ, ಭಕ್ತಿ ಎರಡೂ ಇದೆ. ನಾನು ಪ್ರಾಮಾಣಿಕವಾಗಿ ಬೆಳೆದು ಬಂದಿದ್ದೇನೆ ಎಂದು ಅವರ ಮೇಲೆ ಪ್ರಮಾಣ ಮಾಡಿ. ನಾನೂ ಪ್ರಮಾಣ ಮಾಡುತ್ತೇನೆ ಎಂದು ಡಿಕೆಶಿಗೆ ಕುಮಾರಸ್ವಾಮಿ ನೇರ ಸವಾಲು ಹಾಕಿದರು.
ಈ ಡಿಕೆಶಿಗೆ ಅಜ್ಜಯ್ಯನ ಶಾಪವೂ ಆರಂಭವಾಗಿದೆ. ಎಷ್ಟು ಮನೆಗಳನ್ನು ಒಡೆದು ನೀವು ಬೆಳೆದಿದ್ದೀರಿ ಎಂದು ನನಗೆ ಗೊತ್ತಿದೆ. ನಾನು ಏನೂ ಮಾಡಿಯೇ ಇಲ್ಲ, ಸ್ವಚ್ಛವಾಗಿದ್ದೇನೆ ಎಂದು ಅಜ್ಜಯನ ಮುಂದೆ ನಿಂತು ಪ್ರಮಾಣ ಮಾಡಲಿ ಎಂದರು.
ನಾನು ಯಾರಿಗೂ ದ್ರೋಹ ಮಾಡಲಿಲ್ಲ. ಮಾಡುವುದೂ ಇಲ್ಲ. ಜನರ ಆಶೀರ್ವಾದವೇ ನನ್ನ ಬಲ, ಅದೇ ನನ್ನ ಬೆಳೆಸಿದೆ. ನಾನು ಯಡಿಯೂರಪ್ಪ ಅವರಿಗೂ ದ್ರೋಹ ಮಾಡಲಿಲ್ಲ. ಆ ಸಂದರ್ಭದಲ್ಲಿ ಅನಿವಾರ್ಯ ಕಾರಣಗಳಿಂದ ಅಧಿಕಾರ ಹಂಚಿಕೆ ಆಗಲಿಲ್ಲ. ನಾನು ಯಡಿಯೂರಪ್ಪ ಅವರಿಗೆ ಯಾವತ್ತೂ ದ್ರೋಹ ಮಾಡಿಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿ ಕಾಂಗ್ರೆಸ್ ನಿದ್ದೆಗೆಡಿಸಿದೆ. ಅದಕ್ಕೆ ಶಿವಕುಮಾರ್ ನಮ್ಮ ಮೈತ್ರಿ ಬಗ್ಗೆ ಹೊಟ್ಟೆ ಉರಿ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.