ಬೆಂಗಳೂರು: "ಅವರ ಹೆಸರನ್ನು ನೆನಪಿಸಿಕೊಳ್ಳದಿದ್ದರೆ ನಮಗೆ ನಿದ್ದೆಯೇ ಬರಲ್ಲ. ಹುಚ್ಚಾಸ್ಪತ್ರೆಗೆ ಸೇರ್ಬೇಕಂತೆ, ಮೆಡಿಕಲ್ ಟ್ರೀಟ್ಮೆಂಟ್ ತೊಗೋಬೇಕಂತ ಹೇಳಿದ್ದಾರೆ. ನನಗೆ ಸಮಸ್ಯೆ ಇತ್ತು ಹೌದು. ಅದಕ್ಕೆ ಬೇಕಾದ ಚಿಕಿತ್ಸೆ ಪಡೆದೇ ಬಂದಿದ್ದೇನೆ. ನಾನು ಯಾವುದೋ ಆಸ್ಪತ್ರೆ ಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಬರುವ ಅವಶ್ಯಕತೆ ಇಲ್ಲ. ನನ್ನ ಆರೋಗ್ಯದ ಬಗ್ಗೆ ನಿಮಗೆ ಕಾಳಜಿ ಬೇಡ" ಎಂದು ಹೇಳುವ ಮೂಲಕ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ (ETV Bharat) ಪಕ್ಷದ ಕಚೇರಿ ಜೆ.ಪಿ. ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ನಾನು ಈಗಾಗಲೇ ಹೃದಯ ಚಿಕಿತ್ಸೆ ಪಡೆದು ಬಂದಿದ್ದೇನೆ. ನಾನು ಚೆನ್ನಾಗಿಯೇ ಇದ್ದೇನೆ" ಎಂದು ತಿರುಗೇಟು ನೀಡಿದರು.
ಸಿಎಂ ತಪ್ಪೇ ಮಾಡಿಲ್ಲವಂತೆ: ಇನ್ನು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ ಹೆಚ್ಡಿಕೆ, "ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಡಾದವರೇ 62 ಕೋಟಿ ರೂ. ಹಣ ಕೊಡಬೇಕಂತೆ. ಹಾಗಾಗಿ ರೆಡ್ ಕಾರ್ಪೆಟ್ ಹಾಕಿ 14 ಸೈಟ್ ನೀಡಿದ್ದು, ಸಿಎಂ ಅವರು ತಪ್ಪೇ ಮಾಡಿಲ್ವಂತೆ" ಎಂದು ವ್ಯಂಗ್ಯವಾಡಿದರು.
ಮುಡಾದಲ್ಲಿ ಹಗರಣವೇ ನಡೆದಿಲ್ಲ ಎಂದು ಸಚಿವ ಭೈರತಿ ಸುರೇಶ್ ಹೇಳಿದ್ದಾರೆ. ಹಗರಣ ನಡೆದಿಲ್ಲ ಎಂದಾದರೆ ಅಧಿಕಾರಿಗಳನ್ನು ಇಟ್ಟು ಯಾಕೆ ತನಿಖೆ ನಡೆಸುತ್ತಿದ್ದಾರೆ. ಹೆಲಿಕಾಪ್ಟರ್ನಲ್ಲಿ ಹೋಗಿ ಯಾವ ದಾಖಲೆ ತುಂಬಿಕೊಂಡು ಬಂದ್ರಿ. ರೀಡು ಹಗರಣ ಎಲ್ಲಿಗೆ ತಂದಿದ್ದೀರಿ, ಅದರ ಕಥೆ ಏನಾಯಿತು" ಎಂದು ಪ್ರಶ್ನಿಸಿದರು.
ಮುಡಾದಲ್ಲೂ ದೊಡ್ಡ ಕರ್ಮಕಾಂಡ: "ಮುಡಾದಲ್ಲೂ ದೊಡ್ಡ ಬ್ರಹ್ಮಾಂಡ ಭ್ರಷ್ಟಾಚಾರವೇ ಇದೆ. ಇದರ ಬಗ್ಗೆ ನಾನೇನು ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಅವರ ಸರ್ಕಾರದಲ್ಲಿರುವ ಶಾಸಕರು, ಸಚಿವರೇ ಮಾಡುತ್ತಾರೆ. ಈ ಹಗರಣ ನನ್ನ ಮುಂದೆ ಕಳೆದ ವರ್ಷವೇ ಬಂದಿತ್ತು. ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದಾರೆ. ಈ ಅಧಿಕಾರಿ ಎಷ್ಟು ಭಾರಿ ಕಡತಗಳನ್ನು ನಗರಾಭಿವೃದ್ಧಿ ಇಲಾಖೆಗೆ ಕಳಿಸಿದ್ದಾರೆ? ಆ ಕಡತಗಳನ್ನು ಎಲ್ಲಿಗೆ ತೆಗೆದುಕೊಂಡು ಹೋಗಿ ಇಟ್ಟಿದ್ದೀರಿ? ಎಂದು ಪ್ರಶ್ನೆ ಮಾಡಿದರು.
ಒಂದು ವರ್ಷದಲ್ಲಿ ಮಾಡಿರುವ ಕರ್ಮಕಾಂಡಗಳೇನು? ನೀರಾವರಿ ಸರಬರಾಜು ನಿಗಮ ಆಯ್ದ ಗುತ್ತಿಗೆದಾರರಿಗೆ ಹಣ ಕೊಟ್ಟು ಲೂಟಿ ಆಗುತ್ತಿದೆ ಅಂತ ನಿಮ್ಮ ಪಕ್ಷದ ಶಾಸಕರೇ ಹೇಳಿದ್ದಾರೆ. ಅದಕ್ಕೆ ಮುಖ್ಯಮಂತ್ರಿಯಿಂದ ಉತ್ತರ ಬಂದಿದೆಯಾ? ಮತ್ತೆ ಹುಬ್ಬಳ್ಳಿಯಲ್ಲಿ ಅಹಿಂದಾ ಸಮಾವೇಶ ಬೇರೆ ನಡೆಯುತ್ತದೆಯಂತೆ" ಎಂದು ಟೀಕಾ ಪ್ರಹಾರ ನಡೆಸಿದರು.
"ಬೆಳಗ್ಗೆ ಎದ್ದರೆ ಸಾಕು ಭ್ರಷ್ಟಾಚಾರ. ಇದಕ್ಕೆ ಜಿ.ಟಿ ದೇವೇಗೌಡರನ್ನು ಕೇಳಿ ಅಂತ ರೆಫರ್ ಮಾಡ್ತಾರೆ. ಬೀದಿ ಬೀದಿಗಳಲ್ಲಿ ಮುಡಾ ದಾಖಲೆ ರವಾನೆಯಾಗುತ್ತಿವೆ. ಸಿಎಂ ಈ ಪ್ರಕರಣವನ್ನು ಲಘುವಾಗಿ ತೆಗೆದುಕೊಂಡಿದ್ದಾರೆ. ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ಹಗರಣ ಏನಾಗಿದೆ. ಬ್ಯಾಂಕ್ನಲ್ಲಿ ಇಡಿ ಎಂಬ ಆದೇಶ ಮಾಡಿದ್ದೀರಿ. ಈಗ ವೈನ್ ಶಾಪ್, ಸೈಕಲ್ ಶಾಪ್ನಲ್ಲಿ ಸಿಕ್ಕ ಸಿಕ್ಕ ಕಡೆ ಹಣ ವಸೂಲಿ ಮಾಡುತ್ತಿದ್ದೀರಿ. ಈಗ ನನ್ನ ಸರ್ಕಾರ ಭ್ರಷ್ಟರಹಿತ ಸರ್ಕಾರ ಅಂತ ಹೇಳಿದ್ರಲ್ಲಾ, ನಿಮಗೆ ನೈತಿಕತೆ ಇದೆಯಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಕೇಳಿದರು.
ಜನ ವಿರೋಧಿ ನಿಲುವು: "ಈ ಸರ್ಕಾರದಲ್ಲಿ ಹಲವು ಜನ ವಿರೋಧಿ ನಿಲುವುಗಳನ್ನು ತೆಗೆದುಕೊಂಡಿದ್ದಾರೆ. ಹಾಲಿನ ದರ ಹಾಗೂ ಪ್ರಮಾಣದ ಬಗ್ಗೆ ಸರ್ಕಾರದಿಂದ ಸ್ಪಷ್ಟತೆ ಇಲ್ಲ. ಹಾಲಿನ ಪ್ರಮಾಣ ಹೆಚ್ಚು ಮಾಡಿ ದರ ಏರಿಕೆ ಮಾಡಿ ಎಂದು ಜನರೇನಾದರೂ ಹೇಳಿದರಾ ಇವರಿಗೆ? ಈಗಾಗಲೇ ಪೆಟ್ರೋಲ್, ಡೀಸೆಲ್ ದರ ಏರಿಕೆ ಆಗಿದೆ. ಈಗ ಹಾಲಿನ ದರ ಏರಿಕೆ ಮಾಡಿದ್ದಾರೆ. ಹನಿ ನೀರಾವರಿ ಪದ್ಧತಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಬ್ಸಿಡಿ ಇತ್ತು. 48 ಪರ್ಸೆಂಟ್ ಇದ್ದ ಸಬ್ಸಿಡಿಯನ್ನು 18 ಪರ್ಸೆಂಟ್ಗೆ ಇಳಿಸಿದ್ದಾರೆ. ರೈತಗೆ ಇವರ ಸರ್ಕಾರ ಎಷ್ಟು ಪ್ರೋತ್ಸಾಹ ಕೊಡ್ತಿದೆ ಎಂದು ಇದರಿಂದಲೇ ಗೊತ್ತಾಗುತ್ತಿದೆ. ಜಮೀನಿನಲ್ಲಿ ಹೊಸ ಟಿಸಿ ತಗೊಳ್ಳಲು 2.5 ಲಕ್ಷ ದುಡ್ಡು ಕೊಡಬೇಕು. ನಿರಂತರವಾಗಿ ಜನರ ಮೇಲೆ ಗ್ಯಾರಂಟಿಗಳ ಹೆಸರಿನಲ್ಲಿ ತೆರಿಗೆ ಭಾರ ಹೊರಸಿದ್ದಾರೆ" ಎಂದು ಹೆಚ್ಡಿಕೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
"ನಿನ್ನೆ ಸಿಎಂ ಹಾಗೂ ಸಮಾಜ ಕಲ್ಯಾಣ ಸಚಿವರ ಮಾತನ್ನು ಗಮನಿಸಿದೆ. ಎಸ್ಸಿಎಸ್ ಟಿಎಸ್ಪಿ ಹಣ ಕ್ರಿಯಾ ಯೋಜನೆಗಳ ಹಂಚಿಕೆ ಬಗ್ಗೆ ಮಾತನಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಬೇರೆ ಯಾವ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಗ್ರ್ಯಾಂಟ್ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಮಂಡಿಸಿರುವ 3 ಲಕ್ಷ 65 ಸಾವಿರ ಬಜೆಟ್ನಲ್ಲಿ 40 ಸಾವಿರ ಕೋಟಿ ರೂ.ಗಳನ್ನು ಎಸ್ಸಿಎಸ್ ಟಿಎಸ್ಪಿಗೆ ಕೊಟ್ಟಿದ್ದಾರೆ. ಬೆನ್ನು ತಟ್ಟಿಕೊಳ್ಳುವ ಮುನ್ನ ಇದರ ಬಗ್ಗೆ ಮಾಹಿತಿ ತರಿಸಿಕೊಂಡು ನೋಡಿ" ಎಂದು ಸಿಎಂಗೆ ತಿರುಗೇಟು ನೀಡಿದರು.
ಇದನ್ನೂ ಓದಿ:ಕೆಲವರಿಗೆ ನನ್ನನ್ನು ನೆನಪಿಸಿಕೊಳ್ಳದಿದ್ದರೆ ನಿದ್ದೆಯೂ ಬರುವುದಿಲ್ಲ: ಕುಮಾರಸ್ವಾಮಿ ಆರೋಪಕ್ಕೆ ಡಿಸಿಎಂ ಕಿಡಿ - D K Shivakumar