ರಾಮನಗರ :ಚನ್ನಪಟ್ಟಣ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯೇ ಕಣಕ್ಕಿಳಿಯುವುದು ಬಹುತೇಕ ಫಿಕ್ಸ್ ಎಂದು ಹೇಳಲಾಗುತ್ತಿದೆ. ಪಕ್ಷ ಸಂಘಟನೆ ಉದ್ದೇಶದಿಂದ ಚನ್ನಪಟ್ಟಣ ಕ್ಷೇತ್ರಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ಅವರು, ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಚಾರಕ್ಕಿಳಿದಿದ್ದಾರೆ. ಎನ್ಡಿಎ ಮುಖಂಡರ ಸಭೆ ನಡೆಸಿ ಅಭ್ಯರ್ಥಿ ಆಯ್ಕೆ ಮಾಡಲಾಗುವುದು, ಯಾರೇ ಅಭ್ಯರ್ಥಿಯಾದರೂ ನಿಮ್ಮ ಬೆಂಬಲದ ಅವಶ್ಯಕತೆ ಇದೆ. ಕಾಂಗ್ರೆಸ್ ಪಕ್ಷದ ಮುಖಂಡರನ್ನ ನಂಬಬೇಡಿ ಎಂದರು.
ರಂಗೇರಿದ ಚನ್ನಪಟ್ಟಣ ಉಪಚುನಾವಣೆ : ಉಪಚುನಾವಣೆ ಘೋಷಣೆ ಮುನ್ನವೇ ಬೊಂಬೆನಗರಿ ಚನ್ನಪಟ್ಟಣ ಉಪಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರಿದೆ. ಒಂದೆಡೆ ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಕಳೆದ ನಾಲ್ಕೈದು ತಿಂಗಳಿಂದ 20ಕ್ಕೂ ಹೆಚ್ಚು ಬಾರಿ ಕ್ಷೇತ್ರಕ್ಕೆ ಆಗಮಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆ. ಈ ಹಿನ್ನೆಲೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭಾನುವಾರ ಚನ್ನಪಟ್ಟಣ ಕ್ಷೇತ್ರಕ್ಕೆ ಲಗ್ಗೆ ಇಡುವ ಮೂಲಕ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದರು.
ಕ್ಷೇತ್ರದ ಕೋಡಂಬಳ್ಳಿ, ಇಗ್ಗಲೂರು, ಮಳೂರು, ಬೇವೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಹೆಚ್. ಡಿ ಕೆ, 'ಇಂದು ಪಕ್ಷದ ಕಾರ್ಯಕರ್ತರು, ಮುಖಂಡರ ಸಭೆ ಕರೆದಿದ್ದೇನೆ. ಜಿ. ಪಂ ವ್ಯಾಪ್ತಿಯ 5 ಭಾಗದಲ್ಲಿ ಸಭೆ ಮಾಡುತ್ತಿದ್ದೇನೆ. ಇದೇ 10ರಂದು ಮತ್ತೆ ಚನ್ನಪಟ್ಟಣದಲ್ಲಿ ಸಭೆ ಮಾಡುತ್ತಿದ್ದೇನೆ. ಇಲ್ಲಿ ಎನ್ಡಿಎ ಅಭ್ಯರ್ಥಿ ಗೆಲ್ಲಿಸಲು ಏನೇನು ಅಭಿಪ್ರಾಯ ಸಿಗುತ್ತದೆಯೋ ಅದನ್ನು ಸಂಗ್ರಹಿಸುತ್ತಿದ್ದೇನೆ' ಎಂದರು.
ಚನ್ನಪಟ್ಟಣಕ್ಕೆ ಇವರ ಕೊಡುಗೆ ಏನು? ಚನ್ನಪಟ್ಟಣಕ್ಕೆ ಡಿಕೆಶಿ ಅನುದಾನ ತಂದಿದ್ದೇನೆ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಎಲ್ಲಿದೆ ಅನುದಾನ? ಎಲ್ಲಿ ತಂದವ್ರೆ, ಯಾವುದೋ ಬೋರ್ಡ್ಗಳಲ್ಲಿ ಮಾತ್ರವಾ? ನಮ್ಮ ಕಾಲದಲ್ಲಿ ಏನೂ ಆಗಿಲ್ಲ ಅಂತಾರಲ್ಲ. ಎಲ್ಲಾ ದಾಖಲೆಗಳನ್ನ ಬಿಡುಗಡೆ ಮಾಡುತ್ತೇನೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗೂ ಚನ್ನಪಟ್ಟಣಕ್ಕೆ ಅನುದಾನ ತಂದಿರೋದು ನಾನು. ಮೂರು ತಿಂಗಳಲ್ಲಿ ಚನ್ನಪಟ್ಟಣಕ್ಕೆ ಇವರ ಕೊಡುಗೆ ಏನು? ನಾನು ಸೇತುವೆಗಳ ನಿರ್ಮಾಣಕ್ಕೆ ಅನುಮತಿ ಕೊಡಿಸಿದ್ದೆ. ಅದಕ್ಕೆ ಚೆಕ್ ಡ್ಯಾಂ ಅಂತ ಪಕ್ಕದಲ್ಲಿ ಬೋರ್ಡ್ ಹಾಕೊಂಡು ಓಡಾಡುತ್ತಿದ್ದಾರೆ ಎಂದು ಟೀಕಿಸಿದರು.
ಮೂರು ತಿಂಗಳಲ್ಲಿ 20 ದಿನ ಬಂದಿದ್ದೇನೆ ಅಂತಿರಲ್ಲ. ಏನು ಮಾಡಿದ್ದೀರಿ ಪಟ್ಟಿ ಇಡಿ. ಒಬ್ಬ 300 ಕೋಟಿ ರೂ. ಇನ್ವೆಸ್ಟ್ ಮಾಡಿದ್ದೀವಿ ಅಂತಾನೆ, ಮತ್ತೊಬ್ಬ 500 ಕೋಟಿ ರೂ. ಅಂತಾನೆ. ಎಲ್ಲಿದೆ ಹಣ? ಇವರ ಕೈಯಲ್ಲಿ ರಸ್ತೆ ಗುಂಡಿ ಮುಚ್ಚಲು ಆಗಿಲ್ಲ ಎಂದು ಡಿಸಿಎಂ ಡಿ. ಕೆ ಶಿವಕುಮಾರ್ಗೆ ಕುಮಾರಸ್ವಾಮಿ ತಿರುಗೇಟು ನೀಡಿದರು.