ಬೆಂಗಳೂರು:''ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ 3ನೇ ಅಧಿಕಾರಾವಧಿಯ ಮೊದಲ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ್ದು, ವಿಕಸಿತ ಭಾರತ ನಿರ್ಮಾಣಕ್ಕೆ ಸುಭದ್ರ ಅಡಿಪಾಯ ಕಲ್ಪಿಸುವ, ದೇಶದ ಸಮಗ್ರ ಹಾಗೂ ಸರ್ವಾಂಗೀಣ ಅಭಿವೃದ್ಧಿಯ ವೇಗಕ್ಕೆ ಮತ್ತಷ್ಟು ಶಕ್ತಿ ತುಂಬುವ ಬಜೆಟ್ ಇದಾಗಿದೆ'' ಎಂದು ಬಿಜೆಪಿ ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
''ಮುಂದಿನ 5 ವರ್ಷಗಳ ರಾಷ್ಟ್ರದ ಪ್ರಗತಿಗೆ ಈ ಬಜೆಟ್ ದಿಕ್ಸೂಚಿಯಾಗಿದ್ದು, ಕೃಷಿ, ಉದ್ಯೋಗ, ಕೌಶಲ್ಯಾಭಿವೃದ್ಧಿ, ಸಾಮಾಜಿಕ ನ್ಯಾಯ, ಉತ್ಪಾದನೆ, ಸೇವಾ ವಲಯ, ಮೂಲಸೌಕರ್ಯಾಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದೆ. ಕೃಷಿ ವಲಯದ ಉತ್ಪಾದಕತೆ ಹೆಚ್ಚಳಕ್ಕೆ ಮತ್ತಷ್ಟು ಅನುಕೂಲ ಕಲ್ಪಿಸಲು 1.52 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ. ಹಾಗೆಯೇ, ವೇತನ ಪಡೆಯುವ ಉದ್ಯೋಗಿಗಳಿಗೆ ನೆರವಾಗಲು ಹೊಸ ತೆರಿಗೆ ಪದ್ಧತಿಯಲ್ಲಿ, ಆದಾಯ ತೆರಿಗೆಯಲ್ಲಿ 17,500 ರೂ.ಗಳವರೆಗೆ ಉಳಿತಾಯವಾಗುವಂತೆ ಸುಧಾರಣೆ ತರಲಾಗಿದೆ. ದೇಶದ ಪ್ರತಿಯೊಬ್ಬ ನಾಗರಿಕನನ್ನು ಸಬಲೀಕರಣಗೊಳಿಸುವ ಮತ್ತು ಸಮೃದ್ಧ, ಸಶಕ್ತ ರಾಷ್ಟ್ರ ನಿರ್ಮಾಣದ ನಿಟ್ಟಿನಲ್ಲಿ ಸರ್ವಸ್ಪರ್ಶಿ, ಅಭಿವೃದ್ಧಿ ಪೂರಕ ಬಜೆಟ್ ಅನ್ನು ವಿತ್ತ ಸಚಿವರು ಮಂಡಿಸಿದ್ದಾರೆ'' ಎಂದು ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ವಿಜಯೇಂದ್ರ ಅಭಿನಂದನೆ:''ಲೋಕಸಭೆಯಲ್ಲಿ ಇಂದು ಮಂಡಿಸಲಾದ 2024-25ನೇ ಸಾಲಿನ ಬಜೆಟ್‌ನಲ್ಲಿ ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿಗಾಗಿ 1.48 ಲಕ್ಷ ಕೋಟಿ ಮೀಸಲಿಡುವುದಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪದ ವಿಕಸಿತ ಭಾರತದ ನಿರ್ಮಾಣಕ್ಕೆ ಉತ್ತಮ ಅಡಿಪಾಯ ಹಾಕಿದ್ದಾರೆ'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದ್ದಾರೆ.
''ದೇಶದ ಅರ್ಥ ವ್ಯವಸ್ಥೆಗೆ ಶರವೇಗ ನೀಡುವ ನಿಟ್ಟಿನಲ್ಲಿ ಘೋಷಿಸಿರುವ ಕಾರ್ಯಕ್ರಮಗಳು ಹಣದುಬ್ಬರವನ್ನು ನಿಯಂತ್ರಿಸಲಿದ್ದು, ಬಡತನ ನಿರ್ಮೂಲನೆ, ಗ್ರಾಮೀಣಾಭಿವೃದ್ಧಿಗೆ 2.66 ಲಕ್ಷ ಕೋಟಿ ರೂ ಮೀಸಲಿರಿಸಿ, ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ ರೂ. ಅನುದಾನ ನೀಡುವ ಮೂಲಕ ರೈತರ ಏಳಿಗೆಗೆ, ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿರುವುದು ರೈತರು ಹಾಗೂ ಸ್ತ್ರೀ ಕುಲದ ಬಗೆಗಿನ ಅದಮ್ಯ ವಿಶ್ವಾಸವನ್ನು ಸಂಕೇತಿಸಿದೆ. ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳು ಹಾಗೂ ಉದ್ಯಮಗಳ ಬೆಳವಣಿಗೆಗೆ ವಿಶೇಷ ಒತ್ತು ನೀಡುವ ಮೂಲಕ ಯುವ ಸಮುದಾಯಕ್ಕೆ ಸ್ವಾವಲಂಬಿ ಹಾಗೂ ಉದ್ಯೋಗ ಸೃಷ್ಟಿಗೆ ಬೃಹತ್ ಪ್ರಮಾಣದಲ್ಲಿ ಉತ್ತೇಜನ ನೀಡಲು ಮನ್ನಣೆ ದೊರಕಿರುವುದು ನಿಜಕ್ಕೂ ಪ್ರಶಂಸನೀಯ ಹೆಜ್ಜೆಯಾಗಿದೆ'' ಎಂದಿದ್ದಾರೆ.
''ಅಂತೆಯೇ ಭಾರತದ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಹೆಚ್ಚಿಸುವ ನಿಟ್ಟಿನಲ್ಲಿ ತೆರಿಗೆದಾರನಿಗೆ ಹೊರೆಯಾಗದಂತೆ ವಿತ್ತ ಸಚಿವರು ಎಚ್ಚರವಹಿಸಿ ಜಾಣ್ಮೆ ತೋರಿದ್ದಾರೆ. ಉಚಿತ ಪಡಿತರ ಯೋಜನೆ 2029 ರ ವರೆಗೆ ಮುಂದುವರೆಸಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ 5 ವರ್ಷ ವಿಸ್ತರಣೆ ಮಾಡುವ ಮೂಲಕ ಬಡವರ ಬಗೆಗಿನ ಕಾಳಜಿಯಲ್ಲಿ ರಾಜಿಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂಬ ಸಂದೇಶ ರವಾನಿಸಲಾಗಿದೆ. ಸತತ 7ನೇ ಬಾರಿಗೆ ಅತ್ಯುತ್ತಮ ಹಾಗೂ ಪ್ರಗತಿದಾಯಕ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಿದ ನಿರ್ಮಲಾ ಸೀತಾರಾಮನ್ ಅವರನ್ನು ರಾಜ್ಯದ ಜನತೆಯ ಪರವಾಗಿ ಅಭಿನಂದಿಸುವೆ'' ಎಂದು ಟ್ವೀಟ್ ಮಾಡಿದ್ದಾರೆ.