ಬೆಂಗಳೂರು: ಸರ್ವಾನುಮತದಿಂದ ಸಿಎಂ ಸಿದ್ದರಾಮಯ್ಯನವರಿಗೆ ಬೆಂಬಲ ನೀಡಲು ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆಯ ಬಳಿಕ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಆರು ಕಾಂಗ್ರೆಸ್ ಶಾಸಕರು ಸಭೆಗೆ ಬಂದಿರಲಿಲ್ಲ. ಉಳಿದೆಲ್ಲಾ ಶಾಸಕರು ಭಾಗಿಯಾಗಿದ್ದರು. ರಾಜ್ಯದ ಕಾರ್ಯಕರ್ತರು ಸಿಎಂ ಪರವಾಗಿ ನಿಂತು ಪ್ರತಿಭಟನೆ ಮಾಡುತ್ತಿದ್ದಾರೆ. ಸರ್ವಾನುಮತದಿಂದ ಸಿಎಂಗೆ ಬೆಂಬಲ ನೀಡುವ ಪ್ರಸ್ತಾವನೆಯನ್ನು ಆರ್.ವಿ.ದೇಶಪಾಂಡೆ ಸಭೆಯ ಮುಂದೆ ಸೂಚಿಸಿದರು. ಆ ನಿರ್ಣಯವನ್ನು ತನ್ವೀರ್ ಸೇಠ್ ಅನುಮೋದಿಸಿದರು ಎಂದು ತಿಳಿಸಿದರು.
ರಾಜ್ಯಪಾಲರು ರಾಜಕಾರಣ ಮಾಡುತ್ತಿದ್ದಾರೆ. ತನಿಖೆ ಇಲ್ಲದೆ ಪೂರ್ವಾನುಮತಿ ನೀಡಿರುವುದನ್ನು ಸರ್ವಾನುಮತದಿಂದ ಖಂಡಿಸಿದ್ದೇವೆ. ಸಿಎಂ ಸಿದ್ದರಾಮಯ್ಯ ನಮ್ಮ ನಾಯಕ ಎಂದು ಬೆಂಬಲ ಸೂಚಿಸಿದ್ದೇವೆ. ನಾವೆಲ್ಲರೂ ಒಗ್ಗಟ್ಟಾಗಿ ಇದ್ದೇವೆ. ರಾಜ್ಯ ಸರ್ಕಾರ ಜನಪರ ಕಾರ್ಯಕ್ರಮ ನೀಡುತ್ತಿದೆ. ಸರ್ಕಾರವನ್ನು ಅಭ್ರದಗೊಳಿಸಲು ಯತ್ನಿಸುತ್ತಿದ್ದಾರೆ. ಏನೇ ಪ್ರಯತ್ನ ಮಾಡಿದರೂ ಸರ್ಕಾರ ಜಗ್ಗಲ್ಲ. ಇಡೀ ಶಾಸಕರು ಸಿಎಂಗೆ ಬೆಂಬಲ ಸೂಚಿಸಿದ್ದಾರೆ ಎಂದರು.
ನ್ಯಾಯಾಲಯದಲ್ಲಿ ನಮಗೆ ನಂಬಿಕೆ ಇದೆ. ನಾಳೆ ದಿಲ್ಲಿಗೆ ಹೋಗುತ್ತಿದ್ದೇವೆ. ಹೈಕಮಾಂಡ್ ನಮ್ಮನ್ನು ಕರೆದಿಲ್ಲ. ನಾವೇ ಹೋಗಿ ಹೈಕಮಾಂಡ್ ಜೊತೆ ಚರ್ಚಿಸುತ್ತೇವೆ. ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದೇವೆ ಎಂದು ಪ್ರತಿಕ್ರಿಯೆ ನೀಡಿದರು.
ಕಾಂಗ್ರೆಸ್ ಶಾಸಕಾಂಗ ಸಭೆ (ETV Bharat) ರಾಷ್ಟ್ರಪತಿ ಮುಂದೆ ಪರೇಡ್‌ಗೆ ಕೆಲವು ಶಾಸಕರ ಸಲಹೆ:ಸಿದ್ದರಾಮಯ್ಯ ವಿರುದ್ಧ ತನಿಖೆಗೆ ರಾಜ್ಯಪಾಲರು ಪೂರ್ವಾನುಮತಿ ನೀಡಿರುವುದನ್ನು ವಿರೋಧಿಸಿ ರಾಷ್ಟ್ರಪತಿ ಭವನಕ್ಕೆ ಕೈ ಶಾಸಕರ ಪರೇಡ್ ನಡೆಸಲು ಶಾಸಕಾಂಗ ಸಭೆಯಲ್ಲಿ ಕೈ ಶಾಸಕ ಬಿ.ಆರ್.ಪಾಟೀಲ್ ಸಲಹೆ ನೀಡಿದರು. ನಾಳೆ ದೆಹಲಿಯಲ್ಲಿ ಹೈ ಕಮಾಂಡ್ ಜೊತೆ ಚರ್ಚಿಸಿ ಆ ಬಳಿಕ ತೀರ್ಮಾನಿಸೋಣ ಎಂದು ಸಿಎಂ ತಿಳಿಸಿದರು.
ಇದಕ್ಕೂ ಮುಂಚೆ ಸಭೆ ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮುಡಾ ಪ್ರಕರಣದ ಬಗ್ಗೆ ವಿವರಣೆ ಕೊಟ್ಟರು. ಈ ಪ್ರಕರಣದಲ್ಲಿ ನನ್ನದೇನು ತಪ್ಪಿಲ್ಲ. ಎಲ್ಲವೂ ಕಾನೂನಾತ್ಮಕವಾಗಿ ನಡೆದಿದೆ. ಬಿಜೆಪಿ-ಜೆಡಿಎಸ್ ಉದ್ದೇಶಪೂರ್ವಕವಾಗಿ ಆರೋಪ ಮಾಡುತ್ತಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ನಿಮಗೆ ಯಾವುದೇ ಗೊಂದಲ ಬೇಡ. ರಾಜ್ಯಪಾಲರು ನಡೆ ಹೇಗೆ ರಾಜಕೀಯ ಪ್ರೇರಿತವಾಗಿದೆ ಎಂದು ಶಾಸಕರಿಗೆ ವಿವರಣೆ ನೀಡಿದರು.
ಬಳಿಕ ಶಾಸಕರು ಕೂಡಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ನಾವು ನಿಮ್ಮ ಬೆಂಬಲಕ್ಕೆ ನಿಂತಿದ್ದೇವೆ. ಮುಡಾ ಪ್ರಕರಣ ಸಂಬಂಧ ಕಾನೂನು ಹಾಗೂ ರಾಜಕೀಯ ಹೋರಾಟದಲ್ಲಿ ನಾವು ನಿಮ್ಮ ಜೊತೆ ಇದ್ದೇವೆ. ನಮಗೆ ನಿಮ್ಮ ಮೇಲೆ ಸಂಪೂರ್ಣ ವಿಶ್ವಾಸ ಇದೆ ಎಂದು ಬೆಂಬಲ ಸೂಚಿಸಿದರು.
ಇನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಹಗರಣಗಳ ಬಗ್ಗೆ ಕ್ಷೇತ್ರದಲ್ಲಿ ಶಾಸಕರ ಗಟ್ಟಿಯಾಗಿ ಧ್ವನಿ ಎತ್ತಬೇಕು. ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಶಾಸಕರಿಗೆ ಸಲಹೆ ನೀಡಿದರು.
ಇದನ್ನೂ ಓದಿ:ಪ್ರಾಸಿಕ್ಯೂಷನ್‌ಗೆ ಬಾಕಿ ಇರುವ ಕೇಸುಗಳ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಸಲಹೆ ನೀಡಲು ಸಂಪುಟ ಸಭೆ ನಿರ್ಧಾರ - Cabinet Meeting Decisions