ಬೆಂಗಳೂರು:ಯುಗಾದಿ ಹಬ್ಬದ ಪ್ರಯುಕ್ತ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಇಂದು ವಸ್ತುಗಳ ಖರೀದಿ ಜೋರಾಗಿತ್ತು. ಬೆಲೆ ಏರಿಕೆಯಾಗಿದ್ದರೂ ವಸ್ತುಗಳನ್ನು ಕೊಂಡುಕೊಳ್ಳಲು ಜನರು ಮುಗಿಬಿದ್ದಿದ್ದರು.
ಕೆ.ಆರ್.ಮಾರುಕಟ್ಟೆಯಲ್ಲಿ ಜನರು ತಾಜಾ ಹೂವು, ಹಣ್ಣು, ತರಕಾರಿ, ತಳಿರು ತೋರಣಗಳನ್ನು ಖರೀದಿಸುತ್ತಿದ್ದರು. ಗಾಂಧಿ ಬಜಾರ್, ಮಲ್ಲೇಶ್ವರಂನಲ್ಲೂ ಭರ್ಜರಿ ವ್ಯಾಪಾರ ನಡೆಯುತ್ತಿತ್ತು.
ಹಣ್ಣಿನ ದರ ತುಸು ಏರಿಕೆಯಾಗಿದೆ. ಈ ಮೊದಲು ಪ್ರತಿ ಕೆಜಿಗೆ 100 ರೂ.ರಷ್ಟು ಇದ್ದಂತಹ ಸೀಬೆ ಹಣ್ಣು 120 ರೂ.ಗೆ ಏರಿಕೆಯಾಗಿದೆ. ಏಲಕ್ಕಿ ಬಾಳೆಹಣ್ಣಿಗೆ 60 ರೂ.ಇದ್ದದ್ದು ಈಗ 80 ರೂ.ಆಗಿದೆ. ಕರ್ಬೂಜಕ್ಕೆ 50 ರೂ. ಇತ್ತು, ಪ್ರಸ್ತುತ 80 ರೂ. ಆಗಿದೆ. ಮೂಸಂಬಿ 80 ರೂ.ಇದ್ದದ್ದು ಈಗ 100 ರೂ ಗೆ ಮಾರಾಟವಾಗುತ್ತಿದೆ. ಸೇಬಿಗೆ 120 ರೂ.ಇತ್ತು, ಈಗ 200 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದಾಳಿಂಬೆ 180 ರೂ. ಅಷ್ಟಿತ್ತು, ಈಗ 200 ರೂ.ಯಾಗಿದೆ, ಪಪ್ಪಾಯ 40 ರೂ ಇತ್ತು ಈಗ 60 ರೂ.ಯಂತೆ ವ್ಯಾಪಾರಸ್ಥರು ಮಾರಾಟ ಮಾಡುತ್ತಿದ್ದರು.
ಮಲ್ಲೇಶ್ವರ, ಕೆ.ಆರ್.ಮಾರುಕಟ್ಟೆ, ಯಶವಂತಪುರ, ಬಸವನಗುಡಿ, ಸೇರಿದಂತೆ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹೂಗಳ ಪೂರೈಕೆ ಕಡಿಮೆಯಾಗಿದೆ. ಇದರಿಂದ ಬೆಲೆ ಅಧಿಕವಾಗಿದೆ. ಪ್ರತಿ ಕೆಜಿಯಂತೆ ಗುಲಾಬಿ 400 ರೂ., ಸೇವಂತಿಗೆ 250 ಯಿಂದ 300 ರೂ., ಮಲ್ಲಿಗೆ 600 ರೂ.ಯಿಂದ 900 ರೂ., ಕನಕಾಂಬರ 600 ರೂ.ದಿಂದ 800 ರೂ., ಕಾಕಡ 500 ರೂ., ಸುಗಂಧರಾಜ 160 ರೂ. ಹಾಗೂ ಚೆಂಡು ಹೂ 80 ರೂ.ದಿಂದ 100 ರೂ.ಗೆ ಮಾರಾಟ ನಡೆಯುತ್ತಿತ್ತು.