ಉಡುಪಿ: ತಡರಾತ್ರಿ ಕಾರೊಂದು ಬೆಂಕಿಯಿಂದ ಹೊತ್ತಿ ಉರಿದ ಘಟನೆ ಮಣಿಪಾಲದ ಬಬ್ಬುಸ್ವಾಮಿ ದೈವಸ್ಥಾನದ ಎದುರು ನಡೆದಿದೆ. ರಸ್ತೆ ಬದಿ ನಿಲ್ಲಿಸಿದ್ದ ರಿಟ್ಜ್ ಕಾರು ಬೆಂಕಿಗಾಹುತಿಯಾಗಿದೆ. ಸಂಬಂಧಪಟ್ಟ ವಾಹನದ ಮಾಲಿಕ ತನ್ನ ಕಾರನ್ನು ರಸ್ತೆ ಬದಿ ನಿಲ್ಲಿಸಿ ಮಲಗಿದ್ದರು. ಕಾರಿನ ಬಾನೆಟ್ನಲ್ಲಿ ಹೊಗೆಯನ್ನ ಕಂಡು ಕಾರು ಮಾಲಿಕ ಹೊರ ಬಂದಿದ್ದಾರೆ. ಆ ವೇಳೆಯಲ್ಲಿಯೇ ಕಾರಿನ ಒಳಗಡೆ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿಯ ಕೆನ್ನಾಲೆಗೆಯಿಂದ ಕಾರು ಹೊತ್ತಿ ಉರಿದು ಸಂಪೂರ್ಣ ಸುಟ್ಟುಹೋಗಿದೆ. ಕಾರು ಮಾಲೀಕನ ಮಾಹಿತಿ ಮೇಲೆ ಸ್ಥಳಕ್ಕಾಗಮಿಸಿದ ಉಡುಪಿಯ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ.
ಬಸ್ನಿಂದ ಜಿಗಿದು ಪ್ರಾಣ ಉಳಿಸಿಕೊಂಡ ಪ್ರಯಾಣಿಕರು:ಬಸ್ ಚಲಾಯಿಸುತ್ತಿದ್ದ ವೇಳೆ ಏಕಾಏಕಿ ಚಾಲಕ ಅಸ್ವಸ್ಥಗೊಂಡ ಪರಿಣಾಮ ಬಸ್ ಹಿಂದಕ್ಕೆ ಚಲಿಸಿದೆ. ಈ ವೇಳೆ, ಬಸ್ ರಸ್ತೆ ಬದಿಯ ಮೋರಿ ತಾಗಿ ನಿಂತ ಪರಿಣಾಮ ಸಂಭಾವ್ಯ ಅಪಾಯದಿಂದ ಪ್ರಯಾಣಿಕರು ಪಾರಾದ ಘಟನೆ ಮಣಿಪಾಲ ಸಮೀಪದ ಕೆಳ ಪರ್ಕಳದಲ್ಲಿ ಗುರುವಾರ ಸಂಜೆ ನಡೆದಿದೆ.