ಆನೇಕಲ್: ಕ್ಷುಲ್ಲಕ ಕಾರಣಕ್ಕೆ ಇಬ್ಬರು ಯುವಕರಿಗೆ ಚಾಕು ಇರಿತ ಆನೇಕಲ್ (ಬೆಂಗಳೂರು):ಕ್ಷುಲ್ಲಕ ಕಾರಣಕ್ಕೆ ಇಬ್ಬರು ಯುವಕರಿಗೆ ಚಾಕು ಇರಿದು, ಮತ್ತೋರ್ವ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ಆನೇಕಲ್ ತಾಲೂಕಿನ ಹೀಲಲಿಗೆ ಕ್ರಾಸ್ ಬಳಿ ನಡೆದಿದೆ. ಸುನಿಲ್ ಮತ್ತು ಕಾರ್ತಿಕ್ ಚಾಕು ಇರಿತಕ್ಕೊಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಏನಿದು ಘಟನೆ?: ರಸ್ತೆಗೆ ಅಡ್ಡಲಾಗಿ ಲಾರಿಯನ್ನು ನಿಲ್ಲಿಸಿದ್ದ ಚಾಲಕನಿಗೆ ಬೈಕ್ ಸವಾರ ಅಂಕಿತ್ ಲಾರಿಯನ್ನು ಪಕ್ಕಕ್ಕೆ ನಿಲ್ಲಿಸುವಂತೆ ಸೂಚಿಸಿದ್ದಾನೆ. ಇದೇ ವೇಳೆ ಅಲ್ಲಿಯೇ ಇದ್ದ ಟಿಟಿ ವಾಹನದ ಚಾಲಕ ಶ್ರೀಧರ್ ನನಗೆ ಅಂಕಿತ್ ವಾಹನ ಪಕ್ಕಕ್ಕೆ ಹಾಕುವಂತೆ ಹೇಳುತ್ತಿದ್ದಾನೆ ಎಂದು ಭಾವಿಸಿ ಏಕಾಏಕಿ ಹಲ್ಲೆ ಮಾಡಿದ್ದಾನೆ. ಅಂಕಿತ್ ತಕ್ಷಣ ಕಾರ್ತಿಕ್ ಹಾಗೂ ಸುನಿಲ್ಗೆ ಸ್ಥಳಕ್ಕೆ ಬರುವಂತೆ ಸೂಚಿಸಿದ್ದಾನೆ. ಅವರು ಬಂದು ಏಕೆ ಹಲ್ಲೆ ಮಾಡಿದ್ದೀರಾ ಎಂದು ಶ್ರೀಧರ್ನನ್ನು ಪ್ರಶ್ನಿಸಿದ್ದಾರೆ. ಇದರಿಂದ ಕೋಪಗೊಂಡ ಶ್ರೀಧರ್ ತನ್ನ ಸಹಚರರನ್ನು ಕರೆಸಿಕೊಂಡು ಸುನಿಲ್ ಹಾಗೂ ಕಾರ್ತಿಕ್ ಮೇಲೆ ಹಲ್ಲೆ ನಡೆಸಿ ಚಾಕು ಇರಿದಿದ್ದಾರೆ ಎಂದು ಆರೋಪಿಸಲಾಗಿದೆ.
ಗಾಯಗೊಂಡ ಸುನಿಲ್ ಹಾಗೂ ಕಾರ್ತಿಕ್ ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಸೂರ್ಯ ನಗರ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕಿ, ಆಸ್ಪತ್ರೆ ಬಳಿ ಗುಂಪು ಸೇರಿದ್ದವರನ್ನು ಚದುರಿಸಿದ್ದಾರೆ.
ಇದನ್ನೂ ಓದಿ:ಟ್ರಾಫಿಕ್ ಕಾನ್ಸ್ಟೇಬಲ್ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದ ಬೈಕ್ ಸವಾರ ಅರೆಸ್ಟ್ - Bike Rider Arrested
ಬೈಕ್ ಸವಾರನ ಮೇಲೆ ಹಲ್ಲೆ: ಇಬ್ಬರ ಬಂಧನ(ಬೆಂಗಳೂರು): ಇತ್ತೀಚಿಗೆ, ಪಾವತಿಸಿದ ಹಣಕ್ಕೆ ಪೆಟ್ರೋಲ್ ಹಾಕಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ಯುವಕನ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಬಂಕ್ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸಿಬ್ಬಂದಿ ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದರು. ಹಲ್ಲೆಗೊಳಗಾದ ಅಬೂಬಕರ್ ಸಹೋದರ ನೀಡಿದ ದೂರಿನ ಮೇರೆಗೆ ಪೆಟ್ರೋಲ್ ಬಂಕ್ನ ಮ್ಯಾನೇಜರ್ ಸುರೇಶ್, ಸಿಬ್ಬಂದಿ ದೇವರಾಜ್ ಎಂಬುವರನ್ನು ಬಂಧಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ ಬಂಕ್ ಮಾಲೀಕ ರಂಗಸ್ವಾಮಿ ಹಾಗೂ ಸಿಬ್ಬಂದಿ ದೇವರಾಜ್ ಪರಾರಿಯಾಗಿದ್ದು, ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಗುರುವಾರ ಬೆಳಗ್ಗೆ 10.30 ಸುಮಾರಿಗೆ ಪೀಣ್ಯ 2ನೇ ಹಂತದಲ್ಲಿರುವ ಹೆಚ್.ಪಿ ಪೆಟ್ರೋಲ್ ಬಂಕ್ಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಅಬೂಬಕರ್ ಬಂದಿದ್ದರು. 480 ರೂಪಾಯಿಗೆ ಪೆಟ್ರೋಲ್ ಹಾಕಿಸಿಕೊಂಡಿದ್ದರು. ಆದರೆ, ಪಾವತಿಸಿದ ಹಣಕ್ಕೆ ಸರಿಯಾಗಿ ಪೆಟ್ರೋಲ್ ದರದ ಸೂಚಕ ಅಸ್ಪಷ್ಟವಾಗಿರುವುದನ್ನು ಕಂಡು ಬಿಲ್ ನೀಡುವಂತೆ ಮನವಿ ಮಾಡಿದ್ದರು. ಬಳಿಕ ಪೂರ್ಣ ಪ್ರಮಾಣದಲ್ಲಿ ಪೆಟ್ರೋಲ್ ಹಾಕಿಲ್ಲ ಎಂದು ಅಪಾದಿಸಿದ್ದರು.
ಇದಕ್ಕೆ ಸಿಬ್ಬಂದಿಯು 480 ರೂಪಾಯಿ ಪೆಟ್ರೋಲ್ ಹಾಕಿರುವುದಕ್ಕೆ ಬೇರೆ ಬಿಲ್ ನೀಡಿದ್ದಕ್ಕೆ ಅನುಮಾನಗೊಂಡು ಪೆಟ್ರೋಲ್ ವಿಚಾರದಲ್ಲಿ ಮೋಸವಾಗಿದೆ ಎಂದು ಧ್ವನಿ ಏರಿಸಿದ್ದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಮೂವರು ಸಿಬ್ಬಂದಿ ಬೈಕ್ ಸವಾರನ ಜೊತೆ ಮಾತಿನ ಚಕಮಕಿಗಿಳಿದಿದ್ದಾರೆ. ಗಲಾಟೆ ವಿಕೋಪಕ್ಕೆ ಹೋಗಿ ಸಿಬ್ಬಂದಿ ಆತನ ಮೇಲೆ ಹಲ್ಲೆ ಮಾಡಿದ್ದರು.