ತಮಿಳುನಾಡು- ಕರ್ನಾಟಕ ಗಡಿಯಲ್ಲಿ ಆನೆ ದಾಳಿಗೆ ಮಹಿಳೆಯರಿಬ್ಬರು ಸಾವು ಆನೇಕಲ್: ತಮಿಳುನಾಡು- ಕರ್ನಾಟಕ ಗಡಿಯಲ್ಲಿ ಆನೆ ದಾಳಿಯಿಂದ ಮಹಿಳೆಯರಿಬ್ಬರು ಸಾವನ್ನಪ್ಪಿದ್ದಾರೆ. ಜೊತೆಗೆ ಎರಡು ಹಸುಗಳು ಸಹ ಮೃತಪಟ್ಟಿವೆ. ತಮಿಳುನಾಡಿನ ಡೆಂಕಣಿಕೋಟೆ ಕಾಡಂಚಿನಲ್ಲಿ ಸಂಚರಿಸಿದ ಒಂಟಿ ಸಲಗದ ದಾಳಿಯಿಂದ ಇಬ್ಬರು ಮಹಿಳೆಯುರು ಹಾಗೂ ಎರಡು ಹಸುಗಳು ಬಲಿಯಾಗಿರುವ ಘಟನೆ ಕುರಿತು ವರದಿಯಾಗಿದೆ.
ಒಂಟಿ ಸಲಗಯೊಂದು ತಳಿ ಡೆಂಕಣಿಕೋಟೆ ಸುತ್ತ ಶನಿವಾರ ರಾತ್ರಿ ವೇಳೆ ಸಂಚರಿಸುತ್ತಿದ್ದವು. ಇತ್ತೀಚೆಗೆ ಡೆಂಕಣಿಕೋಟೆ ಸರ್ಕಾರಿ ಶಾಲಾ ಆವರಣದಲ್ಲಿ ಈ ಸಲಗ ಸಂಚಾರ ಮಾಡಿತ್ತು. ತಳಿ ದಾಸರಹಳ್ಳಿಯ ವಸಂತಮ್ಮ(37) ಮತ್ತು ಅನ್ನಿಯಾಳಮ್ಮ(45) ಎಂಬುವರು ಆನೆ ದಾಳಿಯಿಂದ ಸಾವನ್ನಪ್ಪಿರುವ ಮಹಿಳೆಯರು ಎಂದು ಗುರುತಿಸಲಾಗಿದೆ.
ಕಾಡಿನಲ್ಲಿ ದನಗಳ ಮೇಲೆಯೂ ಏಕಾಏಕಿ ಕಾಡಾನೆ ದಾಳಿ ನಡೆಸಿದೆ. ಪ್ರತಿ ಬಾರಿ ನಾಡಿನೊಳಗೆ ನುಸುಳುವ ಒಂಟಿ ಸಲಗ ಇದಲ್ಲ. ಇದು ಬೇರೆ ಸಲಗವಾಗಿದೆ ಎಂದು ಗುರುತಿಸಲಾಗಿದೆ. ಈ ಸಲಗವನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯ ಸಿಬ್ಬಂದಿ ಮುಂದಾಗಿರುವ ಬಗ್ಗೆ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಕಾಡಾನೆ ದಾಳಿಯಿಂದ ಸಾವನ್ನಪ್ಪಿದವರ ಕುಟುಂಬದವರು ರಸ್ತೆ ತಡೆ ನಡೆಸಿ ನ್ಯಾಯ ಕೊಡಿಸುವಂತೆ ಅರಣ್ಯಾಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಗ್ರಾಮಸ್ಥರು ಮನೆ ಬಿಟ್ಟು ಹೊರಗೆ ಬಾರದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ಕಾಫಿನಾಡಿನಲ್ಲಿ ಕಾಡಾನೆ ಹಾವಳಿ: ಸಿಸಿಟಿವಿಯಲ್ಲಿ ಸೆರೆಯಾದ ಒಂಟಿ ಸಲಗ