ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ವ್ಯಕ್ತಿ ಕೊಲೆ: ದೂರು ನೀಡಿದ್ದ ಸ್ನೇಹಿತರೇ ಅರೆಸ್ಟ್​ ಆಗಿದ್ದೇಕೆ? - Murder Case - MURDER CASE

ಸ್ನೇಹಿತನನ್ನ ಹತ್ಯೆ ಮಾಡಿದ ಆರೋಪದ ಹಿನ್ನೆಲೆ ದೂರು ನೀಡಿದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Murder Case Bengaluru
ಸ್ನೇಹಿತನನ್ನ ಹತ್ಯೆ ಮಾಡಿದ ಆರೋಪ: ದೂರು ನೀಡಿದ್ದ ಇಬ್ಬರನ್ನು ಬಂಧಿಸಿದ ಪೊಲೀಸರು

By ETV Bharat Karnataka Team

Published : Mar 27, 2024, 1:11 PM IST

ಬೆಂಗಳೂರು:ಮದ್ಯ ಸೇವಿಸುವಾಗ ಉಂಟಾದ ಜಗಳದಲ್ಲಿ ವ್ಯಕ್ತಿ ಹತ್ಯೆಯಾಗಿರುವ ಘಟನೆ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಾಗವಾರದಲ್ಲಿ ನಡೆದಿದೆ.

ಉತ್ತರಪ್ರದೇಶದ ಗೋರಕ್ ಪುರ ಮೂಲದ ನಿವಾಸಿ ರಾಜ್ ಕುಮಾರ್ (35) ಹತ್ಯೆಗೊಳಗಾದ ವ್ಯಕ್ತಿ.‌ ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನಾಗವಾರದಲ್ಲಿ ರೂಮ್ ಮಾಡಿಕೊಂಡಿದ್ದ.‌ ಪೇಂಟಿಂಗ್ ಕೆಲಸ ಮಾಡುತ್ತಿದ್ದ. ನಿನ್ನೆ ಹೋಳಿ ಹಬ್ಬ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡು ಒಟ್ಟಿಗೆ ಮದ್ಯ ಸೇವನೆ ಮಾಡಿದ್ದರು.

ಈ ಮಧ್ಯೆ ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಗಿದೆ‌. ಗಲಾಟೆ ವಿಕೋಪಕ್ಕೆ ಹೋಗಿ ದೊಣ್ಣೆಯಿಂದ ಹೊಡೆದು ಚಾಕುವಿನಿಂದ ತಿವಿದಿದ್ದಾರೆ‌‌‌. ನಿನ್ನೆ (ಮಂಗಳವಾರ) ಸಂಜೆ ಕೃತ್ಯ ನಡೆದಿತ್ತು. ರಾತ್ರಿವರೆಗೂ ಶವದ ಜೊತೆಯಿದ್ದು ಬಳಿಕ ಠಾಣೆಗೆ ಬಂದು ಅಪರಿಚಿತರು ರಾಜಕುಮಾರ್​ನನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ಸ್ನೇಹಿತರಿಬ್ಬರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲಿಸುತ್ತಿದ್ದಾರೆ‌. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನೂ ಬಂಧಿಸಿದ್ದಾರೆ.

ಪ್ರತ್ಯೇಕ ಪ್ರಕರಣ- ಮದ್ಯ ಸೇವಿಸುವಾಗ ನಡೆದ ಗಲಾಟೆ ಹಿನ್ನೆಲೆ ವ್ಯಕ್ತಿ ಮೇಲೆ ಕಾರು ಹತ್ತಿಸಿ ಕೊಲೆ:ತಲಘಟ್ಟಪುರ ಸಂಚಾರ ಠಾಣಾ ಪೊಲೀಸ್ ವ್ಯಾಪ್ತಿಯಲ್ಲಿ ನಡೆದಿದ್ದ ಹಿಟ್ ಆ್ಯಂಡ್ ರನ್ ಕೇಸ್​ಗೆ ಹೊಸ ತಿರುವು ಸಿಕ್ಕಿದೆ. ಈ ಘಟನೆಯಲ್ಲಿ ವ್ಯಕ್ತಿಯ ಹತ್ಯೆಯಾಗಿರುವುದು ತನಿಖೆಯಿಂದ ತಿಳಿದಿದೆ. ಈ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೋಣನಕುಂಟೆ ಹರಿನಗರ ನಿವಾಸಿ ಗೋಪಿ ಹತ್ಯೆಗೀಡಾದವರು. ಇವರ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಕನಕಪುರ ರಸ್ತೆಯ ರಘುವನಹಳ್ಳಿ ನಿವಾಸಿ ಮುನಿಕೃಷ್ಣ ಎಂಬಾತನನ್ನು ಬಂಧಿಸಿದ್ದಾರೆ.

ಘಟನಾ ಸ್ಥಳದಲ್ಲಿದ್ದ ಮೃತನ ಸ್ನೇಹಿತ ಉಮಾಪತಿ ಭಯಗೊಂಡು ತನ್ನೂರು ಮಾಲೂರಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದನು. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಸ್ಚಾರ್ಜ್ ಆದ ನಂತರ ಅವರ ಹೇಳಿಕೆ ಪಡೆಯಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಾರ್ಚ್ 23 ರಂದು ಕನಕಪುರ ರಸ್ತೆಯ ವಾಜರಹಳ್ಳಿ ಬಳಿ ಅಪಘಾತವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಗೋಪಿ ಎಂಬ ವ್ಯಕ್ತಿಯ ಶವ ಪತ್ತೆಯಾಗಿತ್ತು. ಘಟನಾ ಸ್ಥಳಕ್ಕೆ ಬಂದ ಸಂಚಾರ ಪೊಲೀಸರು ಪರಿಶೀಲಿಸಿ ಹಿಟ್ ಆ್ಯಂಡ್ ರನ್ ಕೇಸ್ ದಾಖಲು ಮಾಡಿಕೊಂಡಿದ್ದರು. ಸುತ್ತಮುತ್ತಲಿನ ರಸ್ತೆ ಬದಿಯಲ್ಲಿ ಅಳವಡಿಸಲಾಗಿದ್ದ 15 ರಿಂದ 20 ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಪೊಲೀಸರಿಗೆ ಮಾಹಿತಿ ತಿಳಿದು ಬಂದಿತ್ತು. ಆರೋಪಿ ಮುನಿಕೃಷ್ಣ, ಗೋಪಿಗೆ ಬಲವಾಗಿ ಹೊಡೆದು ಕಾರು ಹತ್ತಿಸಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು‌. ಈ ಕುರಿತು ಕೊಲೆ ಪ್ರಕರಣ ದಾಖಲಿಸಿಕೊಂಡು ಕಾರು ನೋಂದಣಿ ಸಂಖ್ಯೆ ಆಧಾರದ ಮೇರೆಗೆ ಪತ್ತೆ ಮಾಡಿ, ಆರೋಪಿ ಮುನಿಕೃಷ್ಣ ಎಂಬಾತನನ್ನು ಬಂಧನ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಮದ್ಯ ಸೇವಿಸುವಾಗ ಗಲಾಟೆ: ವ್ಯಕ್ತಿಯನ್ನು ಕಾರು ಹತ್ತಿಸಿ ಹತ್ಯೆಗೈದ ಆರೋಪಿ ಸೆರೆ - Murder Case

ABOUT THE AUTHOR

...view details