ಮಂಗಳೂರು:ಅಕ್ರಮವಾಗಿ ಪಿಸ್ತೂಲ್ನ್ನು ಹೊಂದಿದ್ದ ಕೇರಳ ರಾಜ್ಯದ ಆರೋಪಿಗಳಿಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಮೊಹಮ್ಮದ್ ಅಸ್ಗರ್(26), ಅಬ್ದುಲ್ ನಿಸಾರ್.ಕೆ. (29) ಬಂಧಿತರು.
ಉಳ್ಳಾಲ ತಾಲೂಕು ತಲಪಾಡಿ ಗ್ರಾಮದ ಪಿಲಿಕೂರು ಪರಿಸರದಲ್ಲಿ ಇಬ್ಬರು ವ್ಯಕ್ತಿಗಳು ಕಪ್ಪು ಬಣ್ಣದ ಕಾರಿನಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮಾರಕಾಯುಧವಾದ ಪಿಸ್ತೂಲ್ನ್ನು ಇರಿಸಿಕೊಂಡು ಯಾವುದೋ ದುಷ್ಕೃತ್ಯವನ್ನು ನಡೆಸುವುದಕ್ಕಾಗಿ ತಿರುಗಾಡುತ್ತಿದ್ದರೆಂಬ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ 1 ಪಿಸ್ತೂಲ್, 2 ಸಜೀವ ಮದ್ದುಗುಂಡುಗಳು, 2 ಮೊಬೈಲ್ ಫೋನುಗಳು, ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 7,15,000/- ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.