ಬೆಂಗಳೂರು: ಬಿಬಿಎಂಪಿ ಕಸದ ಲಾರಿ ಹರಿದು ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಮೃತಪಟ್ಟ ಘಟನೆ ಭಾನುವಾರ ರಾತ್ರಿ ಕೆ.ಆರ್.ಸರ್ಕಲ್ ಬಳಿ ನಡೆಯಿತು. ಮೃತರನ್ನು ಬಾಣಸವಾಡಿ ನಿವಾಸಿ ಪ್ರಶಾಂತ್ (25) ಹಾಗೂ ಆಂಧ್ರಪ್ರದೇಶ ಮೂಲದ ಶಿಲ್ಪಾ (27) ಎಂದು ಗುರುತಿಸಲಾಗಿದೆ. ಐಟಿಪಿಎಲ್ನ ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ಹಾಗೂ ಶಿಲ್ಪಾ ನಿನ್ನೆ ಊಟಕ್ಕೆಂದು ಹೊರಗಡೆ ಬಂದಿದ್ದಾಗ ಅವಘಡ ಸಂಭವಿಸಿದೆ.
ಅಪಘಾತ ನಡೆದಿದ್ದು ಹೇಗೆ?: ರಾತ್ರಿ 8:45ರ ಸುಮಾರಿಗೆ ಮೆಜೆಸ್ಟಿಕ್‌ನಿಂದ ಕೆ.ಆರ್.ವೃತ್ತದ ಕಡೆ ಬೈಕ್‌ನಲ್ಲಿ ಬರುತ್ತಿದ್ದಾಗ ಸಿಐಡಿ ಜಂಕ್ಷನ್ ಮೂಲಕ ಸಂಪರ್ಕ ಕಲ್ಪಿಸುವ ರಸ್ತೆಯಿಂದ ವೇಗವಾಗಿ ಬಂದ ಲಾರಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಲಾರಿ ಇಬ್ಬರ ಮೈಮೇಲೂ ಹರಿದಿದೆ. ಗಾಯಾಳುಗಳನ್ನು ಸಮೀಪದ ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆಯೇ ಇಬ್ಬರೂ ಮೃತಪಟ್ಟಿದ್ದಾರೆ.
ಅಪಘಾತದ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಹಲಸೂರು ಗೇಟ್ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.