ಬೆಂಗಳೂರು:ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಎರಡೂ ಹಂತದಲ್ಲಿ ಮತದಾನ ಮುಗಿದ ಬೆನ್ನಲ್ಲೇ ವಿಧಾನ ಪರಿಷತ್ನ ಆರು ಸ್ಥಾನಗಳಿಗೆ ಚುನಾವಣೆ ಎದುರಾಗಿದೆ. ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದ್ದು, ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದಾರೆ. ರಾಷ್ಟ್ರೀಯ ಪಕ್ಷಗಳಿಂದ ಯಾವುದೇ ಅಭ್ಯರ್ಥಿ ಇನ್ನೂ ಕಣಕ್ಕಿಳಿದಿಲ್ಲ.
ಕರ್ನಾಟಕ ಈಶಾನ್ಯ ಪದವೀಧರ ಹಾಗೂ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ತಲಾ ಒಬ್ಬರು ಪುರುಷ ಸ್ವತಂತ್ರ ಅಭ್ಯರ್ಥಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ ಈಗಾಗಲೇ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪ್ರಕಟಿಸಿದೆ. ಆದರೆ, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಿಲ್ಲ. ಅಲ್ಲದೆ, ಉಭಯ ಪಕ್ಷಗಳ ನಡುವೆ ಚುನಾವಣಾ ಮೈತ್ರಿ ಮುಂದುವರೆಯಲಿದೆಯೋ, ಇಲ್ಲವೋ? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರ, ಕರ್ನಾಟಕ ನೈರುತ್ಯ ಪದವೀಧರ, ಬೆಂಗಳೂರು ಪದವೀಧರ ಹಾಗೂ ಕರ್ನಾಟಕ ಆಗ್ನೇಯ ಶಿಕ್ಷಕರ, ಕರ್ನಾಟಕ ನೈರುತ್ಯ ಶಿಕ್ಷಕರ ಮತ್ತು ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣಾ ಅಧಿಸೂಚನೆ ಪ್ರಕಟವಾಗಿದೆ.