ಮೈಸೂರು :ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 50:50 ಅನುಪಾತದ ನಿವೇಶನ ಹಾಗೂ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರ 14 ಬದಲಿ ನಿವೇಶನಗಳ ಹಂಚಿಕೆ ವಿಚಾರ ಸಂಬಂಧ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು ಇಂದು ಬಿಜೆಪಿಯ ಮಾಜಿ ಶಾಸಕರಾದ ಎಸ್. ಎ ರಾಮದಾಸ್ ಹಾಗೂ ಎಲ್. ನಾಗೇಂದ್ರ ಅವರನ್ನ ಕರೆಸಿ ಮಾಹಿತಿ ಸಂಗ್ರಹಿಸಿದ್ದಾರೆ.
ಇಂದು ಮಧ್ಯಾಹ್ನ 3 ಗಂಟೆಗೆ ಲೋಕಾಯುಕ್ತ ಕಚೇರಿಗೆ ಆಗಮಿಸಿದ ಕೃಷ್ಣರಾಜ ಕ್ಷೇತ್ರದ ಮಾಜಿ ಶಾಸಕ ರಾಮದಾಸ್ 5 ಗಂಟೆಯವರೆಗೆ ವಿಚಾರಣೆ ಎದುರಿಸಿದರು. ಅವರಿಂದ ಪೊಲೀಸರು ಕೆಲವು ಮಾಹಿತಿಯನ್ನ ಪಡೆದುಕೊಂಡರು.
ಲೋಕಾಯುಕ್ತ ವಿಚಾರಣೆ ಮುಗಿಸಿ ಅವರು ವಾಪಸ್ ತೆರಳುವಾಗ ಮಾಧ್ಯಮದವರು ಅವರನ್ನ ಮಾತನಾಡಿಸಲು ಪ್ರಯತ್ನಿಸಿದರು. ಆದರೆ, ಈ ವೇಳೆ ಅವರು ಮುಡಾ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.