ಉಡುಪಿ: ಮನೆಯ ಸಮೀಪದ ಗದೆಯಲ್ಲಿನ ಬಾವಿಗೆ ಬಿದ್ದ ಪರಿಣಾಮ ಇಬ್ಬರು ಮಕ್ಕಳು ಮೃತಪಟ್ಟು, ತಾಯಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ದಾರುಣ ಘಟನೆ ಕೊಲ್ಲೂರು ಸಮೀಪ ಬೆಳ್ಳಾಲ ಗ್ರಾಮದ ಹೊಟ್ನಬೈಲು ಎಂಬಲ್ಲಿ ಶನಿವಾರ ನಡೆದಿದೆ. ಬಾವಿಗೆ ಬಿದ್ದು ಮೃತಪಟ್ಟ ಮಕ್ಕಳನ್ನು ಸ್ಥಳೀಯ ನಿವಾಸಿ ಶೀಲಾ (34) ಎನ್ನುವವರ 13 ವರ್ಷದ ಪುತ್ರ ಹಾಗೂ 8 ವರ್ಷದ ಪುತ್ರಿ ಎಂದು ಗುರುತಿಸಲಾಗಿದೆ.
ಶನಿವಾರ (ಜೂ. 29) ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ದುರಂತ ನಡೆದಿದೆ ಎನ್ನಲಾಗುತ್ತಿದ್ದು, ಇಬ್ಬರು ಮಕ್ಕಳೊಂದಿಗೆ ತಾಯಿ ಬಾವಿಗೆ ಬಿದ್ದಿರುವುದನ್ನು ನೋಡಿದ ಸ್ಥಳೀಯರು ಮೂವರನ್ನು ರಕ್ಷಣೆ ಮಾಡಲು ಯತ್ನಿಸಿದರಾದರೂ ಮಕ್ಕಳಿಬ್ಬರನ್ನು ಉಳಿಸಿಕೊಳ್ಳಲಾಗಲಿಲ್ಲ. ತಾಯಿ ಶೀಲಾ ಅವರನ್ನು ಚಿಕಿತ್ಸೆಗಾಗಿ ಕುಂದಾಪುರ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ.