ಬೆಂಗಳೂರು :ರಾಜ್ಯ ವಿಧಾನಸಭೆಯಿಂದ ರಾಜ್ಯಸಭಾ ತೆರವಾಗುವ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಮೂವರು, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದರು.
ಮೊದಲಿಗೆ ಮೈತ್ರಿಕೂಟದ ಚುನಾವಣಾ ಅಭ್ಯರ್ಥಿಯಾಗಿ ಬಿಜೆಪಿಯ ನಾರಾಯಣಸಾ ಭಾಂಡಗೆ ಹಾಗೂ ಜೆಡಿಎಸ್ ನಿಂದ ಕುಪೇಂದ್ರ ರೆಡ್ಡಿ ಅವರು ನಾಮ ಪತ್ರ ಸಲ್ಲಿಸಿದರು. ಈ ವೇಳೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್ ವಿಜಯೇಂದ್ರ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಜೊತೆಗಿದ್ದರು. ನಾಮಪತ್ರ ಸಲ್ಲಿಕೆ ಬಳಿಕ ಹೊರಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ನಾರಾಯಣ ಭಾಂಡಗೆ, ಸಾಮಾನ್ಯ ಕಾರ್ಯಕರ್ತನಿಗೂ ಬಿಜೆಪಿ ಗುರುತಿಸಿರುವುದು ಖುಷಿಯಾಗಿದೆ. ನನಗೆ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸುವೆ ಎಂದು ತಿಳಿಸಿದರು.
ನಂತರ ಬಿ.ವೈ ವಿಜಯೇಂದ್ರ ಮಾತನಾಡಿ, ನಾರಾಯಣಸಾ ಭಾಂಡಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಅವರು ಗೆಲ್ಲುವ ವಿಶ್ವಾಸವಿದೆ. ರಾಜ್ಯಕ್ಕೆ ನ್ಯಾಯ ಕೊಡುವ ಕಾರ್ಯ ಆಗಲಿದೆ. ಕರ್ನಾಟಕದಲ್ಲಿ ಕೂಡ ಬಿಜೆಪಿ ಅಧಿಕಾರಕ್ಕೆ ಬಂದಾಗ ರೈತರಿಗೆ ಶಕ್ತಿ ನೀಡುವ ಕೆಲಸ ಮಾಡಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗ ಕೃಷಿ ಕ್ಷೇತ್ರಕ್ಕೆ 7,500 ಸಾವಿರ ಕೋಟಿ ರೂ. ಇಡಲಾಗಿತ್ತು. ಕಾಂಗ್ರೆಸ್ ಬಂದು 4 ಸಾವಿರ ಕೋಟಿ ರೂ ಇಟ್ಟಿದೆ. ರೈತರಿಗೆ ಅನ್ಯಾಯ ಮಾಡುತ್ತಿದೆ. ಕಾಂಗ್ರೆಸ್ ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿ ಆಗುವುದನ್ನ ತಡೆಯಲು ಈ ರೀತಿ ಷಡ್ಯಂತ್ರ ನಡೆಯುತ್ತಿದೆ. ಇದರ ಹಿಂದೆ ಕಾಂಗ್ರೆಸ್ ರಾಜಕೀಯ ಪಿತೂರಿ ಇರೋದು ಸ್ಪಷ್ಟವಾಗಿದೆ. ರೈತರಿಗೆ ಶಕ್ತಿ ಕೊಡುವ ಕೆಲಸ ಬಿಜೆಪಿ ಮಾಡಿದೆ. ಅವರ ಅಕೌಂಟಿಗೆ ಹಣ ಹಾಕುವ ಕೆಲಸ ಮಾಡಿದೆ. ಅದರಲ್ಲಿ ಕಾಂಗ್ರೆಸ್ ಯಶಸ್ವಿ ಆಗಲು ಸಾಧ್ಯವಿಲ್ಲ ಎಂದರು
ಅಡ್ಡ ಮತದಾನ ಹೊಸದೇನಲ್ಲ :ಹೆಚ್.ಡಿ ಕುಮಾರಸ್ವಾಮಿ ಮಾತನಾಡಿ, ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಬಿಜೆಪಿ ಜೊತೆ ಮೈತ್ರಿ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಆಗಿ ನಾರಾಯಣ ಭಾಂಡಗೆ ಇದ್ದಾರೆ. ಅವರ ಜೊತೆ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಲಾಗಿದೆ. ಬಿಜೆಪಿಗೆ ಇರುವ ಹೆಚ್ಚುವರಿ ಮತವನ್ನು ಎನ್‌ಡಿಎ ಅಭ್ಯರ್ಥಿಗೆ ಹಾಕುವ ನಿರ್ಧಾರವನ್ನು ವರಿಷ್ಠರು ತೀರ್ಮಾನಿಸಿದ್ದಾರೆ ಎಂದು ಹೇಳಿದರು.