ತುಮಕೂರು:ಮಕ್ಕಳ ಮಾರಾಟ ಜಾಲವನ್ನು ಪತ್ತೆ ಹಚ್ಚಿರುವ ತುಮಕೂರು ಜಿಲ್ಲಾ ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿ, ಮಾರಾಟ ಮಾಡಲಾಗಿದ್ದ 5 ಮಕ್ಕಳನ್ನು ರಕ್ಷಿಸಿದ್ದಾರೆ. ಮಹೇಶ ಯು.ಡಿ, ಮಹಬೂಬ್, ಕೆ.ಎನ್. ರಾಮಕೃಷ್ಣಪ್ಪ, ಹನುಮಂತರಾಜು, ಮುಬಾರಕ್ ಪಾಷ, ಪೂರ್ಣಿಮಾ ಹಾಗೂ ಸೌಜನ್ಯ ಬಂಧಿತರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜೂನ್ 9ರಂದು ರಾತ್ರಿ ಗುಬ್ಬಿ ತಾಲೂಕಿನ ಅಂತಾಪುರ ಬಳಿ ಮಹಾದೇವಿ ಎಂಬವರ 11 ತಿಂಗಳ ಮಗುವನ್ನು ದುಷ್ಕರ್ಮಿಗಳು ಅಪಹರಿಸಿರುವ ಬಗ್ಗೆ ಗೋಪಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೇವಸ್ಥಾನದ ಬಳಿ ತನ್ನ ಕುಟುಂಬದೊಂದಿಗೆ ಮಲಗಿದ್ದಾಗ ರಾತ್ರಿ ವೇಳೆಯಲ್ಲಿ ಮಗುವನ್ನು ವ್ಯವಸ್ಥಿತ ರೀತಿಯಲ್ಲಿ ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು.
ತನಿಖಾ ತಂಡ ಮಗುವನ್ನು ಕಳ್ಳತನ ಮಾಡಿದ ಆರೋಪದ ಮೇರೆಗೆ ಗುಬ್ಬಿ ತಾಲೂಕು ಬಿಕ್ಕೇಗುಡ್ಡವಾಸಿ ರಾಮಕೃಷ್ಣ ಹಾಗೂ ತುಮಕೂರು ನಗರ ಭಾರತೀ ನಗರದ ವಾಸಿ ಹನುಮಂತರಾಜು ಎಂಬವರನ್ನು ಬಂಧಿಸಿತ್ತು. ಅವರು ನೀಡಿದ ಮಾಹಿತಿ ಮೇರೆಗೆ ಈ ಹಿಂದೆ ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ ಆಗಿ ಕೆಲಸ ಮಾಡುತ್ತಿದ್ದ, ಅಶೋಕ ನಗರದ ನಿವಾಸಿ ಮಹೇಶ್ ಯು.ಡಿ ಎಂಬ ಮತ್ತೊಬ್ಬ ಆರೋಪಿಯನ್ನು ಸೆರೆ ಹಿಡಿದಿತ್ತು.
ವಿಚಾರಣೆ ನಡೆಸಿದಾಗ ಆರೋಪಿಗಳು 1,75,000 ರೂ.ಗಳಿಗೆ ಮಗುವನ್ನು ಬೆಳ್ಳೂರು ಕ್ರಾಸ್ನ ಮುಬಾರಕ್ ಅವರಿಗೆ ಮಾರಾಟ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ನಂತರ ಪೊಲೀಸರು ಮುಬಾರಕ್ನನ್ನು ಬಂಧಿಸಿ ಮಗುವನ್ನು ರಕ್ಷಿಸಿದ್ದಾರೆ. ಈ ಪ್ರಕರಣದ ಆರೋಪಿ ಮಹೇಶ್, ಅವಿವಾಹಿತವಾಗಿ ಗರ್ಭ ಧರಿಸಿದ ಹಾಗೂ ಅಕ್ರಮ ಸಂಬಂಧದಿಂದ ಗರ್ಭ ಧರಿಸಿದ ಮಹಿಳೆಯರನ್ನು ಪತ್ತೆ ಮಾಡಿ ಅವರುಗಳಿಂದ ಮಕ್ಕಳನ್ನು ಪಡೆದುಕೊಂಡು, ಮಕ್ಕಳಿಲ್ಲದ ದಂಪತಿಗೆ 2ರಿಂದ 3 ಲಕ್ಷ ರೂ.ಗಳಿಗೆ ಮಾರಾಟ ಮಾಡುತ್ತಿದ್ದ ಅಂಶ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನು ಈ ಕೃತ್ಯಕ್ಕೆ ಹುಳಿಯಾರಿನ ಮಹೆಬೂಬ್ ಷರೀಫ್ ಸಹಕರಿಸಿದ್ದನಂತೆ. ಈತ ಹುಳಿಯಾರಿನಲ್ಲಿ ತನ್ನ ಹೆಂಡತಿಯ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಯನ್ನು ನಡೆಸುತ್ತಿರುವುದಾಗಿ ತಿಳಿದುಬಂದಿದೆ. ಈತ ಹುಳಿಯಾರು ಹೋಬಳಿ ಗೂಬೆ ಹಳ್ಳಿಯಲ್ಲಿ ಪಿಹೆಚ್ಸಿಯಲ್ಲಿ ಫಾರ್ಮಸಿಸ್ಟ್ ಆಗಿ ಕೆಲಸ
ಮಾಡುತ್ತಿದ್ದ. ಇವರುಗಳ ಹೇಳಿಕೆಯನ್ನು ಆಧರಿಸಿ, ಆರೋಪಿಗಳು ಮಾರಾಟ ಮಾಡಿದ್ದ 9 ಮಕ್ಕಳ ಪೈಕಿ 5 ಮಕ್ಕಳನ್ನು ಪೊಲೀಸರು ರಕ್ಷಿಸಿದ್ದಾರೆ.
ಇದರಲ್ಲಿ ಒಂದು ಮಗು ಮೃತಪಟ್ಟಿದ್ದು, ಇನ್ನೊಂದು ಮಗುವನ್ನು ಪೋಷಕರಿಗೆ ಒಪ್ಪಿಸಲಾಗಿದೆ. ಉಳಿದ ಮಕ್ಕಳನ್ನು, ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ದತ್ತು ಸ್ವೀಕಾರ ಕೇಂದ್ರದಲ್ಲಿ ಇರಿಸಲಾಗಿದೆ. ಆರೋಪಿಗಳಿಂದ ಮಗುವನ್ನು ಅಪಹರಿಸಲು ಬಳಸಿದ್ದ ಮಾರುತಿ 800 ಕಾರು, 50 ಸಾವಿರ ನಗದು ಹಣ, 04 ಮೊಬೈಲ್ಗಳನ್ನು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ:ಈ ಟಿವಿ ಭಾರತ ಇಂಪ್ಯಾಕ್ಟ್: ವರದಿಯಿಂದ ಎಚ್ಚೆತ್ತುಕೊಂಡು ಮಹಾರಾಷ್ಟ್ರದ ಕನ್ನಡ ಶಾಲೆಗಳಿಗೆ ರಾಜ್ಯದ ನಿಯೋಗ ಭೇಟಿ - ETV Bharat Impact