ಚಾಮರಾಜನಗರ:ಕಾಡುಗಳ್ಳ ವೀರಪ್ಪನ್ ನಡೆಸಿದ ಪೈಶಾಚಿಕ ಕೃತ್ಯಕ್ಕೆ ಇಂದು 32 ವರ್ಷಗಳಾಗಿದ್ದರೂ ಸ್ವಾತಂತ್ರ್ಯ ದಿನದ ಮುನ್ನ ಬರುವ ಶೋಕಗೀತೆ ಇಂದಿಗೂ ಆ ಭಾಗದಲ್ಲಿ ಹಸಿರಾಗಿದೆ. ಹನೂರು ತಾಲೂಕಿನ ಮೀಣ್ಯಂ ಸಮೀಪ ಪೊಲೀಸ್ ಅಧಿಕಾರಿಗಳು ಮತ್ತು ವೀರಪ್ಪನ್ ತಂಡದ ಜೊತೆಗೆ ನಡೆದ ಗುಂಡಿನ ಚಕಮಕಿಯಲ್ಲಿ 6 ಮಂದಿ ಪೊಲೀಸರು ಹುತಾತ್ಮರಾಗಿದ್ದರು.
ಹುತಾತ್ಮ ಪೊಲೀಸರಿಗೆ ಗೌರವ ನಮನ (ETV Bharat) ವೀರಪ್ಪನ್ನನ್ನು ಹಿಡಿದೇ ತೀರುತ್ತೇವೆ ಎಂದು ಶಪಥ ಮಾಡಿ ಕಾಡುಗಳ್ಳನ ಹುಟ್ಟಡಗಿಸಲು ತೆರಳಿದ್ದ ಎಸ್ಪಿ ಸೇರಿದಂತೆ 6 ಮಂದಿ ಪೊಲೀಸರು ಹುತಾತ್ಮರಾದ ಮೀಣ್ಯಂ ದಾಳಿ ನಡೆದು ಇಂದಿಗೆ 32 ವರ್ಷಗಳು ಸಂದಿವೆ. ಕಾಡುಗಳ್ಳನ ರಕ್ತಸಿಕ್ತ ಅಧ್ಯಾಯದಲ್ಲಿ ಒಂದಾದ ಹನೂರು ತಾಲೂಕಿನ ರಾಮಾಪುರ ಠಾಣಾ ವ್ಯಾಪ್ತಿಯ ಮೀಣ್ಯಂ ದಾಳಿ ಘಟನೆಯಲ್ಲಿ ಅಡಗಿ ಕುಳಿತಿದ್ದ ವೀರಪ್ಪನ್ ಏಕಾಏಕಿ ನಡುರಸ್ತೆಯಲ್ಲಿ ಪೊಲೀಸರಿಗೆ ಗುಂಡಿನ ಸುರಿಮಳೆಗೈದಿದ್ದ. ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಾಚರಣೆಯ ಮುನ್ನ ಪೊಲೀಸರಿಗೆ ಈ ಮರಣದ ಕಥೆ ಈಗಲೂ ಕಣ್ಣೀರು ತರಿಸುತ್ತದೆ.
ವೀರಪ್ಪನ್ ಅಟ್ಟಹಾಸ ಎಲ್ಲೆ ಮೀರಿದ್ದ 90ರ ದಶಕದಲ್ಲಿ ಎಸ್ಟಿಎಫ್ನಲ್ಲಿ ಕರ್ತವ್ಯ ನಿರ್ವಹಿಸಲು ಹಿಂಜರಿಯುವಂತಹ ಪರಿಸ್ಥಿತಿ ಇತ್ತು. ಆ ವೇಳೆ ಆತನನ್ನು ಹಿಡಿದೇ ತೀರುತ್ತೇವೆ ಎಂದು ಸಾಹಸತನ ತೋರಿದ್ದ ಎಸ್ಪಿ ಹರಿಕೃಷ್ಣ ಹಾಗೂ ಎಸ್ಐ ಶಕೀಲ್ ಅಹ್ಮದ್ ವೀರಪ್ಪನ್ ಮೋಸಕ್ಕೆ ಬಲಿಯಾಗಿದ್ದರು.
ಹುತಾತ್ಮ ಪೊಲೀಸರಿಗೆ ಗೌರವ ನಮನ (ETV Bharat) ಕಾಡುಗಳ್ಳನ ಮೋಸದಾಟ, ಸೇಡಿಗೆ ಪೊಲೀಸರು ಬಲಿ: ಎಸ್ಟಿಎಫ್ ಪಡೆಯ ನಿರಂತರ ಕಾರ್ಯಾಚರಣೆ ವೇಳೆ ವೀರಪ್ಪನ್ ಬಂಟನಾದ ಗುರುನಾಥನ್ ಎಂಬಾತನನ್ನು ಹಿಡಿಯುವ ಅವಕಾಶ ಪೊಲೀಸರಿಗೆ ಒದಗಿ ಬಂದಿತ್ತು. ಆದರೆ ಆತ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದ. ತನ್ನ ನೆಚ್ಚಿನ ಬಂಟನನ್ನು ಕಳೆದುಕೊಂಡಿದ್ದ ವೀರಪ್ಪನ್ ಹರಿಕೃಷ್ಣ ಮತ್ತು ಶಕೀಲ್ ಅಹ್ಮದ್ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದ.
ಹಠಕ್ಕೆ ಬಿದ್ದಿದ್ದ ವೀರಪ್ಪನ್, ಕಮಲ ನಾಯ್ಕ ಎಂಬುವನ ಮೂಲಕ ದಾಳಿ ನಡೆಸಲು ಯೋಜನೆ ರೂಪಿಸುತ್ತಾನೆ. ಕಮಲ ನಾಯ್ಕ, ವೀರಪ್ಪನ್ ಮತ್ತು ಪೊಲೀಸರಿಗೆ ಮಾಹಿತಿದಾರನಂತೆ ಕೆಲಸ ಮಾಡುತ್ತಾನೆ. ವ್ಯಾಪಾರಿಗಳ ಸೋಗಿನಲ್ಲಿ ಕಾಡುಗಳ್ಳನನ್ನು ಹಿಡಿಯಲು ಹೊರಟ ಹರಿಕೃಷ್ಣ ಮತ್ತು ಶಕೀಲ್ ಅಹ್ಮದ್ ಅವರನ್ನು ಮೀಣ್ಯಂ ಬಳಿ ವೀರಪ್ಪನ್ ಹೊಂಚುಹಾಕಿ ಗುಂಡಿನ ದಾಳಿ ನಡೆಸುತ್ತಾನೆ. ಘಟನೆಯಲ್ಲಿ ಅಪ್ಪಚ್ಚು, ಸುಂದರ್, ಕಾಳಪ್ಪ ಸೇರಿದಂತೆ ಕಮಲನಾಯ್ಕನೂ ಮೃತಪಡುತ್ತಾನೆ. ದಾಳಿಯಲ್ಲಿ ಕೆಲ ಪೊಲೀಸರು ಗಾಯಗೊಳ್ಳುತ್ತಾರೆ.
ಮೀಣ್ಯಂ ದಾಳಿಯಲ್ಲಿ ಹುತಾತ್ಮರಾದ ಅಧಿಕಾರಿ ಹಾಗೂ ಆರಕ್ಷಕರು (ETV Bharat) ಸ್ಮಾರಕದ ಬಳಿ ಪೊಲೀಸ್ ನಮನ:ಮೀಣ್ಯಂ ಸಮೀಪ ನಡೆದ ದಾಳಿ ಸ್ಥಳದಲ್ಲಿ ಸ್ಮಾರಕ ನಿರ್ಮಿಸಲಾಗಿದ್ದು, ಪ್ರತಿ ಆ.14ರಂದು ಹುತಾತ್ಮ ಪೊಲೀಸರಿಗೆ ಪೊಲೀಸರು ಗೌರವ ವಂದನೆ ಸಲ್ಲಿಸುತ್ತಾರೆ. ಇಂದು ಕೂಡ ರಾಮಾಪುರ ಠಾಣೆ ಪೊಲೀಸರು ಮೀಣ್ಯಂ ಸ್ಮಾರಕದಲ್ಲಿ ಹುತಾತ್ಮರಿಗೆ ನಮಿಸಿ, ಕರಾಳ ಘಟನೆ ನೆನೆದರು.
ಇದನ್ನೂ ಓದಿ:ಹುತಾತ್ಮರಾದ ಮೂವರು ರೈತರು... 37 ವರ್ಷಗಳ ನಂತರ ಸ್ಮಾರಕ ನಿರ್ಮಿಸಿದ ರೈತ ಸಂಘ