ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಆಹಾರ ಮೇಳದಲ್ಲಿ ಪ್ರಕೃತಿ ಆದಿವಾಸಿ ಫೌಂಡೇಶನ್ ಟ್ರಸ್ಟ್ವತಿಯಿಂದ ಬಂಬೂ ಬಿರಿಯಾನಿ ಸ್ಟಾಲ್ ತೆರೆಯಲಾಗಿದ್ದು, ಆಹಾರ ಪ್ರಿಯರ ಗಮನ ಸೆಳೆಯುತ್ತಿದೆ. ಈ ಬಂಬೂ ಬಿರಿಯಾನಿಯನ್ನು ಹೇಗೆ ತಯಾರಿಸುತ್ತಾರೆ, ಇದನ್ನು ಸೇವಿಸುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು ಹಾಗೂ ಇದರ ಔಷಧಿ ಗುಣಗಳ ಬಗ್ಗೆ ಬಂಬೂ ಬಿರಿಯಾನಿ ಮಳಿಗೆಯ ಕೃಷ್ಣಯ್ಯ 'ಈಟಿವಿ ಭಾರತ'ಕ್ಕೆ ವಿವರಿಸಿದ್ದಾರೆ.
ತಯಾರಿಕೆ ಹೇಗೆ :ಬುಡಕಟ್ಟು ಜನಾಂಗದವರು ಆಹಾರ ಪೌಷ್ಟಿಕಾಂಶಯುಕ್ತ, ನೈಸರ್ಗಿಕ ಮತ್ತು ಬಹಳ ರುಚಿಕರವಾಗಿರುತ್ತದೆ. ಬಂಬೂ ಬಿರಿಯಾನಿಯನ್ನು ವಿಶೇಷವಾಗಿ ತಯಾರಿಸಲಾಗುತ್ತದೆ. ಮೊದಲಿಗೆ ಬಂಬೂ (ಬಿದಿರನ್ನು) ಸರಿಯಾಗಿ ಕಟ್ ಮಾಡಿ, ಸ್ವಚ್ಛವಾಗಿ ತೊಳೆದು ಇನ್ನೊಂದು ಅದಕ್ಕೆ ಸರಿಯಾದ ಅಳತೆಯಲ್ಲಿ ಚಿಕನ್ ಮತ್ತು ಅಕ್ಕಿ ಇನ್ನಿತರ ಮಸಾಲೆ ಪದಾರ್ಥಗಳನ್ನು ತುಂಬುತ್ತಾರೆ. ನಂತರ ಅದನ್ನು ಅರ್ಧ ಗಂಟೆ ಬೆಂಕಿಯಲ್ಲಿ ಬೇಯಿಸಿ, 10 ನಿಮಿಷಗಳ ಕಾಲ ದಮ್‌ನಲ್ಲಿ ಇರಿಸಿ ಜನರಿಗೆ ಉಣಬಡಿಸಲಾಗುತ್ತದೆ ಎಂದರು.
ಬಿದಿರಿನ ರಸ, ಕಾಡು ಕರಿಬೇವು, ಕಾಡು ಅರಿಶಿನ ಹಾಕಿ ಬಿರಿಯಾನಿ ತಯಾರಿಸಲಾಗುತ್ತದೆ. ಇದನ್ನು ನೈಸರ್ಗಿಕವಾಗಿ ಬೆಳೆಯಲಾಗುತ್ತದೆ. ಯಾವುದೇ ರೀತಿಯ ಗೊಬ್ಬರ, ಕ್ರಿಮಿನಾಶಕಗಳನ್ನು ಸೇರಿಸುವುದಿಲ್ಲ. ಇದರಿಂದ ಹೆಚ್ಚು ಆರೋಗ್ಯಕರ ಮತ್ತು ರುಚಿಕರವಾಗಿರುತ್ತದೆ. ನಮ್ಮ ಆದಿವಾಸಿ ಬಂಬೂ ಬಿರಿಯಾನಿಯನ್ನು ಜನರು ಹೆಚ್ಚು ಇಷ್ಟಪಡುತ್ತಿದ್ದು, ಬ್ರ್ಯಾಂಡ್ ಆಗಿ ಬೆಳೆದಿದೆ ಎಂದು ವಿವರಿಸಿದರು.
ಆದಿವಾಸಿ ಬಂಬೂ ಬಿರಿಯಾನಿ (ETV Bharat) ಕಳೆದ 9 ವರ್ಷಗಳಿಂದಲೂ ದಸರಾ ಆಹಾರ ಮೇಳದಲ್ಲಿ ನಮ್ಮ ತಂಡ ಸ್ಟಾಲ್ ಹಾಕುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಬುಡಕಟ್ಟು ಜನಾಂಗದವರ ಆಹಾರ ಪರಂಪರೆಯನ್ನು ಜನರಿಗೆ ಪರಿಚಯಿಸುತ್ತಿದ್ದೇವೆ. ಈ ಬಾರಿ ವಿಶೇಷವಾಗಿ ಮಟನ್ ಬಂಬೂ ಬಿರಿಯಾನಿ ಮಾಡಲಾಗುತ್ತಿದೆ. ಇದನ್ನು ಜನರು ಬಹಳ ಇಷ್ಟಪಡುತ್ತಿದ್ದಾರೆ. ನಮ್ಮ ಸ್ಟಾಲ್ನಲ್ಲಿ ನಾಟಿ ಕೋಳಿ ಬಂಬೂ ಬಿರಿಯಾನಿ, ಬಿದಿರ ಅಕ್ಕಿ ಪಾಯಸ, ಏಡಿ ಸಾರು ಮತ್ತು ಮುದ್ದೆಯನ್ನು ಭಾನುವಾರ ವಿಶೇಷವಾಗಿ ಮಾಡುತ್ತಿದ್ದೇವೆ. ಇದೆಲ್ಲವೂ ಕೂಡ ಆರೋಗ್ಯಕರ ಹಾಗೂ ಪೌಷ್ಟಿಕಾಂಶವುಳ್ಳ ಆಹಾರಗಳಾಗಿವೆ. ಒಮ್ಮೆ ತಿಂದರೆ ಮತ್ತೆ ತಿನ್ನಬೇಕೆನಿಸುತ್ತದೆ ಎಂದು ಹೇಳಿದರು.
ಹಿಂದಿನ ಕಾಲದಲ್ಲಿ ಪಾತ್ರೆಗಳು ಕೂಡ ಇರಲಿಲ್ಲ. ಆ ಸಮಯದಲ್ಲಿ ಬೇಟೆ ಆಡಿದ ಪ್ರಾಣಿಗಳ ಮಾಂಸವನ್ನು ಇದೇ ರೀತಿ ಬಿದಿರಿನ ಒಳಗಡೆ ಹಾಕಿ ಬೇಯಿಸಿ ತಿನ್ನುತ್ತಿದ್ದರು. ಅದು ರುಚಿಕರ ಮತ್ತು ಆರೋಗ್ಯಕರವಾಗಿತ್ತು. ಶತಮಾನಗಳ ಇತಿಹಾಸವಿರುವ ಬುಡಕಟ್ಟು ಆಹಾರ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗುವ ಆಸಕ್ತಿ ನನಗೆ ಇದೆ. ನಾವು ಇಲ್ಲಿ ಜೇನುತುಪ್ಪವನ್ನು ಸಹ ಮಾರಾಟ ಮಾಡುತ್ತಿದ್ದೇವೆ. ಒಂದು ಜೇನು ಹುಳುವಿನ ಜೀವಿತಾವಧಿ 85 ದಿನ. ಇದು ತನ್ನ ಜೀವಿತಾವಧಿಯಲ್ಲಿ ಒಂದು ಚಮಚ ಜೇನುತುಪ್ಪವನ್ನು ಉತ್ಪಾದಿಸುತ್ತದೆ. ಸುಮಾರು 2 ಲಕ್ಷಕ್ಕೂ ಹೆಚ್ಚಿನ ಹೂಗಳನ್ನು ಅದು ಸ್ಪರ್ಶಿಸುತ್ತದೆ. ಹೀಗಾಗಿ ಜೇನುತುಪ್ಪ ಸರ್ವರೋಗಕ್ಕೂ ಮುದ್ದು ಎಂದು ತಿಳಿಸಿದರು.
ಇದನ್ನೂ ಓದಿ:ನಮ್ಮದು ಜನಸಾಮಾನ್ಯರ, ರೈತ ಪರ ಸರ್ಕಾರ: ಸಚಿವ ಎನ್. ಚಲುವರಾಯಸ್ವಾಮಿ - RAITHA DASARA