ಕರ್ನಾಟಕ

karnataka

ETV Bharat / state

ವಿಚಾರಣಾ ನ್ಯಾಯಾಲಯಗಳು ಕಾನೂನು ದುರ್ಬಳಕೆ ಪ್ರಕರಣಗಳನ್ನು ಹತ್ತಿಕ್ಕಬೇಕು: ಹೈಕೋರ್ಟ್ - ಕಾನೂನು ದುರ್ಬಳಕೆ

ಅಧೀನ ನ್ಯಾಯಾಲಯಗಳು ಕಾನೂನು ಪ್ರಕ್ರಿಯೆಗಳನ್ನು ದುರ್ಬಳಕೆ ಮಾಡಿಕೊಳ್ಳದಂತೆ ನೋಡಿಕೊಂಡು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ಹೈಕೋರ್ಟ್​ ಸೂಚನೆ ನೀಡಿದೆ.

High Court
ಹೈಕೋರ್ಟ್​

By ETV Bharat Karnataka Team

Published : Feb 27, 2024, 7:56 PM IST

ಬೆಂಗಳೂರು: ತ್ವರಿತಗತಿ ನ್ಯಾಯಾಲಯಗಳು ಮತ್ತು ಪರ್ಯಾಯ ವ್ಯಾಜ್ಯ ಇತ್ಯರ್ಥ ವಿಧಾನಗಳಿಂದಲೂ ನ್ಯಾಯಾಲಯಗಳ ಮೇಲಿನ ಹೊರೆ ತಗ್ಗುತ್ತಿಲ್ಲ. ಹಾಗಾಗಿ ನ್ಯಾಯಾಲಯಗಳು ಕಾನೂನು ದುರ್ಬಳಕೆಯಂತಹ ಪ್ರಕರಣಗಳನ್ನು ಹತ್ತಿಕ್ಕಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಕ್ರಿಮಿನಲ್ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಬೆಳಗಾವಿಯ ಶಿವಪ್ಪ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಕಾನೂನಿನ ದುರ್ಬಳಕೆ ಪ್ರಕರಣಗಳ ವಿಲೇವಾರಿ ವಿಳಂಬಕ್ಕೆ ಅತ್ಯಂತ ಪ್ರಮುಖ ಕಾರಣ. ಅಂತಹ ಸಂದರ್ಭಗಳಲ್ಲಿ ನ್ಯಾಯಾಲಯಗಳು ಅತ್ಯಂತ ಸೂಕ್ಷ್ಮ ಮತ್ತು ಜಾಗರೂಕತೆಯಿಂದ ತನ್ನ ಮುಂದಿರುವ ಸಾಕ್ಷಿಗಳನ್ನು ಪರಿಶೀಲಿಸಬೇಕು. ಅಗತ್ಯಬಿದ್ದರೆ ಮಾತ್ರ ಅಪರಾಧ ದಂಡ ಸಂಹಿತೆ ಸೆಕ್ಷನ್ 216ರಡಿ ತೀರ್ಪು ನೀಡುವ ಮುನ್ನ ಆರೋಪಗಳನ್ನು ಬದಲಿಸಲು ಅವಕಾಶ ನೀಡಬಹುದು. ನ್ಯಾಯಾಲಯಗಳು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದಿದ್ದರೆ ಪ್ರಕರಣಗಳ ಶೀಘ್ರ ವಿಲೇವಾರಿ ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ನ್ಯಾಯಾಲಯಗಳ ಮೇಲಿನ ಹೊರೆ ಇಳಿಸಲು ತ್ವರಿತಗತಿ ನ್ಯಾಯಾಲಯ ಹಾಗೂ ಪರ್ಯಾಯ ವ್ಯಾಜ್ಯ ಇತ್ಯರ್ಥ ವಿಧಾನಗಳು ಸಾಕಾಗುತ್ತಿಲ್ಲ. ಅಧೀನ ನ್ಯಾಯಾಲಯಗಳು ಕಾನೂನು ಪ್ರಕ್ರಿಯೆಗಳನ್ನು ದುರ್ಬಳಕೆ ಮಾಡಿಕೊಳ್ಳದಂತೆ ನೋಡಿಕೊಂಡು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಸೆಕ್ಷನ್ 216 ಹಾಗೂ 217 ಅನ್ನು ಉಲ್ಲೇಖಿಸಿ, ನ್ಯಾಯಾಲಯಗಳು ಆರೋಪಿಗಳು ಅಥವಾ ದೂರುದಾರರ ಆಗ್ರಹಕ್ಕೆ ಮಣಿಯದೆ ಸ್ವಯಂಪ್ರೇರಿತವಾಗಿ ಕಾನೂನು ಜಾರಿಗೊಳಿಸಬೆಕು. ಒಂದು ವೇಳೆ ನಿಯಮಗಳನ್ವಯ ಪಕ್ಷಗಾರರಿಗೆ ಯಾವುದೇ ಹಕ್ಕು ಇಲ್ಲವಾದರೆ ಅಂತಹ ಸಂದರ್ಭಗಳಲ್ಲಿ ನ್ಯಾಯಾಲಯಗಳು ಅವರಿಗೆ ಹಕ್ಕು ನೀಡಬಾರದು. ಒಂದು ವೇಳೆ ನೀಡಿದರೆ ಆಗ ನ್ಯಾಯದಾನ ವಿಳಂಬವಾಗುತ್ತದೆ.

ಸುಪ್ರೀಂ ಕೋರ್ಟ್ ತೀರ್ಪೊಂದನ್ನು ಉಲ್ಲೇಖಿಸಿರುವ ನ್ಯಾಯಾಲಯ, ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಕೊನೆಯ ಕ್ಷಣದಲ್ಲಿ ಆರೋಪ ಮಾರ್ಪಡಿಸಲು ಸಲ್ಲಿಸಿರುವ ಅರ್ಜಿ ಮಾನ್ಯ ಮಾಡಬಹುದಿತ್ತು ಎಂದು ಹೇಳಿ ಅದೇ ಆಧಾರದ ಮೇಲೆ ಮಧ್ಯಂತರ ಆದೇಶ ರದ್ದುಗೊಳಿಸಿದೆ.

ಇದನ್ನೂ ಓದಿ:ಕನ್ನಡದಲ್ಲೂ ಸುಪ್ರೀಂ ಕೋರ್ಟ್‌ನ ಸಾವಿರಾರು ತೀರ್ಪುಗಳು ಲಭ್ಯ: ಆಸಕ್ತರು ಹೀಗೆ ಓದಿ

ABOUT THE AUTHOR

...view details