ಮಂಡ್ಯ:ರೈತರ ಜೀವನಾಡಿ ಕನ್ನಂಬಾಡಿ ಬಳಿಯ ಪರೀಕ್ಷಾರ್ಥ ಸ್ಫೋಟ ವಿಚಾರ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಈ ನಡುವೆಯೂ ಸರ್ಕಾರ ಮತ್ತು ಜಿಲ್ಲಾಡಳಿತ ಪರೀಕ್ಷಾರ್ಥ ಸ್ಫೋಟ ನಡೆಸಲು ಸಜ್ಜಾಗಿತ್ತು. ಸೋಮವಾರ ಜಾರ್ಖಂಡ್ನಿಂದ ಬಂದಿದ್ದ ತಜ್ಞರ ತಂಡ ಮಂಗಳವಾರ ಪರೀಕ್ಷಾರ್ಥ ಸ್ಫೋಟಕ್ಕಾಗಿ ಸ್ಥಳ ಪರಿಶೀಲನೆಗೆ ತಯಾರಾಗಿತ್ತು. ಆದರೆ ಇದಕ್ಕೆ ರೈತರು, ಹೋರಾಟಗಾರರು ಮತ್ತು ಬಿಜೆಪಿ ಕಾರ್ಯಕರ್ತರು ಭಾರೀ ವಿರೋಧ ವ್ಯಕ್ತಪಡಿಸಿದರು. ಈ ಹೋರಾಟಕ್ಕೆ ತಾತ್ಕಾಲಿಕ ಫಲ ಸಿಕ್ಕಿದೆ.
ಪ್ರಸಿದ್ದ ಪ್ರವಾಸಿ ತಾಣ ಹಾಗು ಕನ್ನಡಿಗರ ಜೀವನಾಡಿ ಕೃಷ್ಣರಾಜಸಾಗರ ಅಣೆಕಟ್ಟೆ. ಈ ಅಣೆಕಟ್ಟೆಯನ್ನು ನಂಬಿಕೊಂಡು ಲಕ್ಷಾಂತರ ಕುಟುಂಬಗಳು ಜೀವನ ಸಾಗಿಸುತ್ತಿವೆ. ಅಣೆಕಟ್ಟೆ ಸುತ್ತಮುತ್ತ ಹಲವು ಕಡೆ ಕಲ್ಲು ಗಣಿಗಾರಿಕೆ ನಡೆಯುತ್ತಲೇ ಇತ್ತು. ಗಣಿಗಾರಿಕೆಯಿಂದ ಅಣೆಕಟ್ಟೆಗೆ ತೊಂದರೆಯಾಗುತ್ತದೆ ಎಂದು ಹಲವಾರು ಹೋರಾಟಗಳಾಗಿದ್ದವು. ಈ ಹಿನ್ನೆಲೆಯಲ್ಲಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಗಣಿ ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದರು. ಹಾಗಾಗಿ ತಜ್ಞರು ಸ್ಥಳ ಪರಿಶೀಲಿಸುವಂತೆ ಸೂಚಿಸಿ ಕೋರ್ಟ್ ಆದೇಶ ಹೊರಡಿಸಿತ್ತು.
ಸೋಮವಾರ ರಾತ್ರಿ ಬೆಂಗಳೂರಿಗೆ ಬಂದಿಳಿದ ತಜ್ಞರ ತಂಡ, ರಾತ್ರಿ 9 ಗಂಟೆಗೆ ಅಣೆಕಟ್ಟು ಬಳಿಗೆ ಬಂದಿದೆ. ಮಂಗಳವಾರ ಬೆಳಗ್ಗೆ ಈ ತಂಡ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಸಭೆ ಸೇರಿದ್ದಾರೆ. ಇತ್ತ ಟ್ರಯಲ್ ಬ್ಲಾಸ್ಟ್ ವಿರೋಧಿಸಿ ರೈತರು, ರೈತ ಸಂಘ ಹಾಗೂ ಬಿಜೆಪಿ ಕಾರ್ಯಕರ್ತರು ಬೃಂದಾವನದ ಉತ್ತರ ಗೇಟ್ ಬಳಿ ಗೋ ಬ್ಯಾಕ್ ಚಳುವಳಿ ನಡೆಸಿದರು. ರಸ್ತೆಯಲ್ಲೇ ಕುಳಿತು ರೈತ ಸಂಘದ ಕಾರ್ಯಕರ್ತರು ಪ್ರತಿಭಟಿಸಿದರೆ, ಒಳ ನುಗ್ಗಲೆತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ತಡೆದರು. ನಂತರ ರೈತ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರನ್ನು ಸಭೆಗೆ ಆಹ್ವಾನಿಸಲಾಯಿತು.