ಕರ್ನಾಟಕ

karnataka

ETV Bharat / state

ತೃತೀಯ ಲಿಂಗಿಗಳಿಗೂ 'ಗೃಹಲಕ್ಷ್ಮಿ' ಹಣ: 'ಸ್ವಾವಲಂಬಿಗಳಾಗಿ ದುಡಿಯಲು ಯೋಜನೆ ಸಹಕಾರಿ'- ಪ್ರಣತಿ ಪ್ರಕಾಶ್ - GRUHALAKSHMI SCHEME

ಗೃಹಲಕ್ಷ್ಮಿ ಯೋಜನೆಯಡಿ ತೃತೀಯ ಲಿಂಗಿಗಳಿಗೂ ಎರಡು ಸಾವಿರ ರೂಪಾಯಿ ಆರ್ಥಿಕ ನೆರವು ಕಲ್ಪಿಸುವ ಸರ್ಕಾರದ ಕಾರ್ಯ ಆರಂಭವಾಗಿದೆ. ತೃತೀಯ ಲಿಂಗಿಗಳ ಸಂಘದ ರಾಜ್ಯ ಸಂಚಾಲಕಿ ಪ್ರಣತಿ ಪ್ರಕಾಶ್‌ ಯೋಜನೆಯ ಮೊದಲನೇ ಕಂತಿನ ಹಣ ಪಡೆದಿದ್ದಾರೆ.

ತೃತೀಯ ಲಿಂಗಿಗಳ ಸಂಘದ ರಾಜ್ಯ ಸಂಚಾಲಕಿ ಪ್ರಣತಿ ಪ್ರಕಾಶ್‌
ತೃತೀಯ ಲಿಂಗಿಗಳ ಸಂಘದ ರಾಜ್ಯ ಸಂಚಾಲಕಿ ಪ್ರಣತಿ ಪ್ರಕಾಶ್‌ (ETV Bharat)

By ETV Bharat Karnataka Team

Published : 5 hours ago

ಮೈಸೂರು:ಕಾಂಗ್ರೆಸ್​ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯಡಿ ತೃತೀಯ ಲಿಂಗಿಗಳಿಗೂ 2 ಸಾವಿರ ರೂಪಾಯಿ ಆರ್ಥಿಕ ನೆರವು ಕಲ್ಪಿಸುವ ಕಾರ್ಯ ಆರಂಭವಾಗಿದೆ. ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ ಹಣ ಪಡೆದಿರುವ ತೃತೀಯ ಲಿಂಗಿ ಪ್ರಣತಿ ಪ್ರಕಾಶ್‌ ಅವರು 'ಈಟಿವಿ ಭಾರತ್‌' ಜೊತೆಗೆ ಸಂತಸ ಹಂಚಿಕೊಂಡರು.

ತೃತೀಯ ಲಿಂಗಿಗಳ ಸಂಘದ ರಾಜ್ಯ ಸಂಚಾಲಕಿಯೂ ಆಗಿರುವ ಪ್ರಣತಿ ಪ್ರಕಾಶ್‌ ಮಾತನಾಡಿ, "ಸಮಾಜದ ಮುಖ್ಯವಾಹಿನಿಗೆ ಬರಲು, ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಲು ಅವಕಾಶ ಮಾಡಿಕೊಟ್ಟ ರಾಜ್ಯ ಸರ್ಕಾರಕ್ಕೆ ನಮ್ಮ ಸಮುದಾಯದ ಪರವಾಗಿ ಧನ್ಯವಾದ ಅರ್ಪಿಸುತ್ತೇವೆ. ನಮಗೆ ಈ ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ಹಣ ಬರುತ್ತಿದೆ. ಶಕ್ತಿ ಯೋಜನೆಯ ಉಚಿತ ಪ್ರಯಾಣದ ವ್ಯವಸ್ಥೆಯನ್ನೂ ನಮಗೆ ಮಾಡಿಕೊಡಲಾಗಿದೆ" ಎಂದು ಹರ್ಷ ವ್ಯಕ್ತಪಡಿಸಿದರು.

ತೃತೀಯ ಲಿಂಗಿಗಳ ಸಂಘದ ರಾಜ್ಯ ಸಂಚಾಲಕಿ ಪ್ರಣತಿ ಪ್ರಕಾಶ್‌ (ETV Bharat)

"ರಾಜ್ಯದಲ್ಲಿ 800 ರಿಂದ 900 ಮಂದಿ ಎಂಎಸ್​ಎಂ, ಎಂಎಸ್​ಡಬ್ಲ್ಯೂ, ಟ್ರಾನ್ಸ್‌ಜೆಂಡರ್‌, ಜೋಗಪ್ಪ ಹಾಗೂ ಜೋಗಮ್ಮಗಳು ಇದ್ದೇವೆ. ಇದರಲ್ಲಿ 200 ರಿಂದ 300 ಜನ ಟಿಜಿ ಕಾರ್ಡ್​ ಮಾಡಿಸಿದ್ದಾರೆ. ಈ ಕಾರ್ಡ್ ಹೊಂದಿರುವವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗಲಿದೆ. ಮೊನ್ನೆ ನನಗೆ ಮೊದಲ ಕಂತಿನ ಗೃಹಲಕ್ಷ್ಮಿ ಹಣ ಬಂತು, ನಂತರ ಸಮುದಾಯದ ಇತರರಿಗೆ ಬಂದಿದೆ" ಎಂದು ಅವರು ಮಾಹಿತಿ ನೀಡಿದರು.

"ಈಗಾಗಲೇ ನಮ್ಮ ಫೋಟೋ, ಆಧಾರ್​ ಕಾರ್ಡ್, ಮೊಬೈಲ್‌ ನಂಬರ್‌ ಹಾಗೂ ಟಿಜೆ ಕಾರ್ಡ್‌ ಅಪ್ರೂವಲ್ ಮಾಡಿದ್ದು, ನಮ್ಮ ಖಾತೆಗೆ ನೇರವಾಗಿ ಹಣ ಬರಲಿದೆ. ಗೃಹಲಕ್ಷ್ಮಿ ಹಣ ಬಂದಿರುವುದು ನಮಗೆ ಸಂತಸ ತಂದಿದೆ. ಭಿಕ್ಷಾಟನೆ ಹಾಗೂ ಮತ್ತಿತರ ಕೆಲಸ ಮಾಡದೇ ನಾವು ಸ್ವಾವಲಂಬಿಗಳಾಗಿ ದುಡಿಯಲು ಈ ಯೋಜನೆ ಸಹಕಾರಿಯಾಗಿದೆ" ಎಂದು ತಿಳಿಸಿದರು.

ಇದನ್ನೂ ಓದಿ:ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ: ಉಡುಪಿ ಜಿ.‍ಪಂಗೆ ರಾಷ್ಟ್ರೀಯ ಪ್ರಶಸ್ತಿ

ABOUT THE AUTHOR

...view details