ಕರ್ನಾಟಕ

karnataka

ಯುದ್ಧ ವಿಮಾನ ವೀಕ್ಷಣೆಗೆ ಪ್ರವಾಸಿಗರ ಕಾತುರ : ಜೋಡೆಣೆಗೊಂಡರೂ ಪ್ರವೇಶಕ್ಕೆ ಮುಕ್ತವಾಗದ ವಿಮಾನ

By ETV Bharat Karnataka Team

Published : Feb 18, 2024, 8:11 PM IST

ಕಾರವಾರದಲ್ಲಿ ಯುದ್ಧ ವಿಮಾನ ಜೋಡಣೆಗೊಂಡು ತಿಂಗಳು ಕಳೆದರೂ ಕೂಡಾ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಸಿಗದಿರುವುದು ಸ್ಥಳೀಯರು ಹಾಗೂ ಪ್ರವಾಸಿಗರ ಬೇಸರಕ್ಕೆ ಕಾರಣವಾಗಿದೆ.

ಕಾರವಾರ
ಕಾರವಾರ

ಸ್ಥಳೀಯರಾದ ಸಂತೋಷ ಗುರುಮಠ ಅವರು ಮಾತನಾಡಿದರು

ಕಾರವಾರ (ಉತ್ತರ ಕನ್ನಡ) : ಕಡಲನಗರಿ ಕಾರವಾರದಲ್ಲಿ ಪ್ರವಾಸೋದ್ಯಮಕ್ಕೆ ಮುಕುಟಪ್ರಾಯದಂತಿದ್ದ ಐಎನ್‌ಎಸ್ ಚಾಪೆಲ್ ಯುದ್ಧ ನೌಕೆ ಜೊತೆ ಇನ್ನೊಂದು ಆಕರ್ಷಣೆಯಾಗಿ ಟುಪೆಲೊವ್ 142 ಎಂ ಯುದ್ಧ ವಿಮಾನ ಸೇರ್ಪಡೆಯಾಗಿದೆ. ಆದರೆ, ಯುದ್ಧ ವಿಮಾನ ಜೋಡಣೆಗೊಂಡು ತಿಂಗಳು ಕಳೆದರೂ ಕೂಡ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಸಿಗದಿರುವುದು ಇದೀಗ ಸ್ಥಳೀಯರು ಹಾಗೂ ಪ್ರವಾಸಿಗರ ಬೇಸರಕ್ಕೂ ಕಾರಣವಾಗತೊಡಗಿದೆ.

ಕಾರವಾರಕ್ಕೆ ಆಗಮಿಸಿದ ಪ್ರವಾಸಿಗರ ಪಾಲಿಗೆ ಕಣ್ಮನ ಸೆಳೆಯುವ ಐಎನ್‌ಎಸ್ ಚಾಪೆಲ್ ಯುದ್ಧ ನೌಕೆ ನಗರದಲ್ಲಿ ಪ್ರಮುಖ ಆಕರ್ಷಣೆಯಾಗಿದೆ. ನಗರಕ್ಕೆ ಯಾರೇ ಹೊಸಬರು ಬಂದರೂ ಕೂಡ ಒಮ್ಮೆಯಾದರೂ ಈ ಯುದ್ಧ ನೌಕೆಯನ್ನು ವೀಕ್ಷಣೆ ಮಾಡುವಷ್ಟು ಕುತೂಹಲವನ್ನು ಇಂದಿಗೂ ಕೂಡ ಉಳಿಸಿಕೊಂಡಿದೆ. ಇದೀಗ ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ತುಕ್ಕು ಹಿಡಿದು ಅವಸಾನದ ಅಂಚು ತಲುಪಿದೆಯಾದರೂ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿಲ್ಲ. ಅದರಲ್ಲಿಯೂ ವೀಕೆಂಡ್ ಹಾಗೂ ಶಾಲಾ ಕಾಲೇಜು ರಜಾ ದಿನಗಳಲ್ಲಿ ಪ್ರವಾಸಿಗರ ದಂಡೇ ಇಲ್ಲಿ ನೆರೆಯುತ್ತಿದೆ.

ಇಂತಹ ಪ್ರವಾಸಿ ಸ್ಥಳದಲ್ಲಿಯೇ ಇದೀಗ ಮತ್ತೊಂದು ಆಕರ್ಷಣೆಯಾಗಿ ಟುಪೆಲೊವ್ ಯುದ್ಧ ವಿಮಾನವನ್ನು ಜೋಡಣೆ ಮಾಡಲಾಗಿದೆ. ಕಳೆದ ಎರಡು ತಿಂಗಳ ಹಿಂದೆ ಚೆನ್ನೈನಿಂದ ಬಿಡಿಭಾಗಗಳನ್ನು ತಂದು ಜೋಡಣೆ ಮಾಡಲಾಗಿದೆ. ಇದೀಗ ಯುದ್ದ ವಿಮಾನದ ಜೋಡಣೆ ಸಂಪೂರ್ಣ ಪೂರ್ಣಗೊಂಡಿದ್ದರೂ ಇನ್ನೂ ಪ್ರವಾಸಿಗರಿಗೆ ವೀಕ್ಷಣೆಗೆ ಮಾತ್ರ ಲಭ್ಯವಾಗಿಲ್ಲ. ಚಾಪೆಲ್ ಯುದ್ಧ ನೌಕೆಯನ್ನು ನೋಡಲು ಆಗಮಿಸುವ ಪ್ರವಾಸಿಗರು ಅಲ್ಲಿಯೇ ಇರುವ ಯುದ್ಧ ವಿಮಾನ ನೋಡುವುದಕ್ಕೂ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

ಆದರೆ ಯುದ್ಧ ವಿಮಾನ ಹತ್ತದಂತೆ ಮೆಟ್ಟಿಲುಗಳಲ್ಲಿ ದಾರಗಳಿಂದ ಕಟ್ಟಲಾಗಿದೆ. ಕೇವಲ ಹೊರ ಭಾಗದಿಂದ ಮಾತ್ರ ವೀಕ್ಷಣೆ ಮಾಡುತ್ತಿರುವ ಪ್ರವಾಸಿಗರಿಗೆ ಯುದ್ಧ ವಿಮಾನದ ಒಳಭಾಗದಲ್ಲಿ ಏನಿದೆ? ಎಂಬುದನ್ನು ನೋಡುವ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ ಅಲ್ಲಿನ ಸಿಬ್ಬಂದಿಯನ್ನು ನಿತ್ಯವೂ ಆಗಮಿಸುವ ಪ್ರತಿಯೊಬ್ಬರು ವಿಚಾರಿಸತೊಡಗಿದ್ದಾರೆ. ಮಾತ್ರವಲ್ಲದೆ 100ಕ್ಕೂ ಹೆಚ್ಚು ಮಂದಿ ಯುದ್ಧ ವಿಮಾನ ನೋಡುವುದಕ್ಕೆ ಅವಕಾಶ ನೀಡಿದ ಬಳಿಕ ಮಾಹಿತಿ ನೀಡುವಂತೆ ಫೋನ್ ನಂಬರ್‌ಗಳನ್ನು ಅಲ್ಲಿನ ಸಿಬ್ಬಂದಿಗೆ ನೀಡಿ ತೆರಳುತ್ತಿದ್ದಾರೆ.

''ಶಾಲಾ ಕಾಲೇಜುಗಳಿಗೆ ರಜಾ ದಿನಗಳು ಹತ್ತಿರ ಬಂದ ಹಿನ್ನೆಲೆ ಇನ್ನು ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗಲಿದೆ. ಆದರೆ ಇಂತಹ ಸಂದರ್ಭದಲ್ಲಿ ಈ ರೀತಿ ಬೀಗ ಹಾಕಿ ಇಟ್ಟಲ್ಲಿ ಯಾರಿಗೂ ಪ್ರಯೋಜನವಿಲ್ಲ. ಜನರಿಗೆ ಯುದ್ಧ ವಿಮಾನ ನೋಡುವ ಕೂತೂಹಲ ಹೆಚ್ಚಾಗಿರುವ ಕಾರಣ ಆದಷ್ಟು ಬೇಗ ಪ್ರವಾಸಿಗರಿಗೆ ನೋಡಲು ಅವಕಾಶ ಕಲ್ಪಿಸುವಂತೆ'' ಸ್ಥಳೀಯರಾದ ಸಂತೋಷ ಗುರುಮಠ ಅವರು ಆಗ್ರಹಿಸಿದ್ದಾರೆ.

ಇನ್ನು 2019ರ ಮಾರ್ಚ್ ತಿಂಗಳಲ್ಲಿ ನಿವೃತ್ತಿ ಹೊಂದಿದ ಟುಪೋಲೆವ್ 142ಒ ಯುದ್ಧ ವಿಮಾನವನ್ನ ಟ್ಯಾಗೋರ್ ಕಡಲತೀರಕ್ಕೆ ತಂದು ಯುದ್ದವಿಮಾನ ವಸ್ತುಸಂಗ್ರಹಾಲಯವಾಗಿ ಮಾರ್ಪಡಿಸಲು ನೌಕಾನೆಲೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ವೈಝಾಗ್‌ನಲ್ಲಿ ನಿವೃತ್ತಿಯಾಗಿದ್ದ 4 ಯುದ್ದವಿಮಾನಗಳಲ್ಲಿ ಟುಪೆಲೊವ್ 142ಎಂ ಯುದ್ದವಿಮಾನವನ್ನ ಕಾರವಾರ ಕಡಲತೀರದಲ್ಲಿ ಮ್ಯೂಸಿಯಂ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಕಳೆದ 2020ರಲ್ಲೇ ಬರಬೇಕಿದ್ದ ಯುದ್ಧವಿಮಾನ ಕೊರೋನಾ ಕಾರಣಕ್ಕೆ ತಡವಾಗಿತ್ತು. ಆದರೆ ಇದೀಗ ಟುಪೆಲೋವ್ ಬಿಡಿಭಾಗಗಳನ್ನು ಜೋಡಣೆ ಮಾಡಲಾಗಿದೆ.

ವೀಕ್ಷಣೆಗೆ ಕಾತುರರಾದ ಪ್ರವಾಸಿಗರು : ''ಕಡಲತೀರಕ್ಕೆ ಆಗಮಿಸುವ ಪ್ರವಾಸಿಗರಿಗೆ ಸದ್ಯ ವಾರ್‌ಶಿಪ್ ಮ್ಯೂಸಿಯಂ ಜೊತೆಗೆ ಯುದ್ಧವಿಮಾನ ವಸ್ತುಸಂಗ್ರಹಾಲಯ ಕೂಡ ಆಕರ್ಷಣೆಯಾಗಿದೆ. ಆದರೆ ಹೊರ ಭಾಗದಿಂದ ವೀಕ್ಷಣೆ ಮಾಡುವ ಪ್ರವಾಸಿಗರು ಇದೀಗ ಒಳಭಾಗದಲ್ಲಿ ಏನಿದೆ ಎಂಬುದನ್ನು ವೀಕ್ಷಣೆ ಮಾಡುವುದಕ್ಕೆ ಕಾತುರಗೊಂಡಿದ್ದಾರೆ. ನಮಗೂ ಕೂಡ ಅಷ್ಟೆ ಕುತೂಹಲ ಇದೆ. ಜಿಲ್ಲಾಡಳಿತ ಕೂಡಲೇ ಈ ಯುದ್ಧ ವಿಮಾನದ ವೀಕ್ಷಣೆಗೆ ಅವಕಾಶ ನೀಡಬೇಕು. ಅಪರೂಪದಲ್ಲಿ ಅಪರೂಪವಾಗಿ ನೋಡಲು ಸಿಗುವ ಈ ಅವಕಾಶಕ್ಕಾಗಿ ನಮ್ಮ ಮಕ್ಕಳು ಕೂಡ ನಿತ್ಯವೂ ವಿಚಾರಿಸುತ್ತಿರುವುದರಿಂದ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕು'' ಎಂದು ಪ್ರವಾಸಿಗರಾದ ಪ್ರವೀಣ ಅವರು ಒತ್ತಾಯಿಸಿದ್ದಾರೆ.

ಇನ್ನು ಈ ಬಗ್ಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರನ್ನು ಕೇಳಿದಾಗ, ಜೋಡಣೆಗೆ ಗುತ್ತಿಗೆ ಪಡೆದವರು ಈವರೆಗೆ ಪೂರ್ಣಗೊಳ್ಳದ ಬಗ್ಗೆ ಕಾರಣ ಬಿಟ್ಟುಕೊಟ್ಟಿಲ್ಲ. ಸದ್ಯದಲ್ಲಿಯೇ ಯುದ್ಧ ವಿಮಾನ ನೋಡಲು ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ :ಅಂತಿಮ‌ ಹಂತಕ್ಕೆ ಯುದ್ಧ ವಿಮಾನ ಜೋಡಣೆ: ಪ್ರವಾಸಿಗರ ಕಣ್ಮನ ಸೆಳೆಯಲಿದೆ ಯುದ್ಧ ವಿಮಾನ, ಹಡಗು

ABOUT THE AUTHOR

...view details