ಚಿಕ್ಕೋಡಿ(ಬೆಳಗಾವಿ):ಮಹಾರಾಷ್ಟ್ರ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಳೆದ ಎರಡು ವಾರಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಕೃಷ್ಣಾ ನದಿ ಮೈದುಂಬಿ ಹರಿಯುತ್ತಿದೆ. ಉಕ್ಕಿ ಹರಿಯುತ್ತಿರುವ ನದಿಯಿಂದಾಗಿ ಯಡೂರು ಶ್ರೀ ವೀರಭದ್ರ ದೇವಾಲಯ ಕಳೆದ ರಾತ್ರಿ ಜಲಾವೃತಗೊಂಡಿತು. ಅರ್ಚಕರು ಮಹಾಮಂಗಳಾರತಿ ನೆರವೇರಿಸಿ ಶಿವಸ್ತೋತ್ರ ಪಾರಾಯಣ ಮಾಡುತ್ತಿದ್ದರು. ಈ ವೇಳೆ ದೇಗುಲವನ್ನು ನೀರು ಆವರಿಸಿಕೊಂಡಿತು. ಭಕ್ತರು ದೂರದಿಂದಲೇ ದೇವರಿಗೆ ನಮಿಸಿದರು.
ಚಿಕ್ಕೋಡಿ ಪೊಲೀಸರು ದೇವಸ್ಥಾನದ ಆವರಣದೆದುರು ಬ್ಯಾರಿಕೇಡ್ ಅಳವಡಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. 2019 ಹಾಗೂ 2021ರಲ್ಲೂ ದೇಗುಲ ಸಂಪೂರ್ಣವಾಗಿ ಮುಳುಗಡೆಯಾಗಿತ್ತು.