ಹಾವೇರಿ:ಜಿಲ್ಲೆಯಲ್ಲಿ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ 159 ಮನೆಗಳಿಗೆ ಹಾನಿಯಾಗಿದೆ. ಸುಮಾರು 12 ರಸ್ತೆ ಸಂಪರ್ಕ ಕಡಿತಗೊಂಡಿದೆ ಎಂದು ಹಾವೇರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ದಾನಮ್ಮನವರ್ ಮಾಹಿತಿ ನೀಡಿದ್ದಾರೆ.
ಹಾವೇರಿಯಲ್ಲಿ ಶನಿವಾರ ಮಾತನಾಡಿದ ಅವರು, ಮಳೆಯಿಂದ ಮನೆ ಕುಸಿದು ಸವಣೂರು ತಾಲೂಕಿನ ಮಾದಾಪುರದಲ್ಲಿ ಶುಕ್ರವಾರ ಮುಂಜಾನೆ ಮೂವರು ಸಾವನ್ನಪ್ಪಿದ್ದಾರೆ. ಪ್ರಸಕ್ತ ಸಾಲಿನ ಮುಂಗಾರಿನಿಂದ 159 ಮನೆಗಳಿಗೆ ಹಾನಿಯಾಗಿದೆ. 7.78 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಪ್ರಕೃತಿ ವಿಕೋಪ ನಿರ್ವಹಣೆಗೆ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 16.43 ಕೋಟಿ ಹಾಗೂ ತಹಶೀಲ್ದಾರ ಖಾತೆಗಳಲ್ಲಿ ರೂ. 5.75 ಕೋಟಿ ಸೇರಿ 22.18 ಕೋಟಿ ಅನುದಾನ ಲಭ್ಯವಿದೆ ಎಂದರು.
ಮಳೆ ವಿವರ:ಜಿಲ್ಲೆಯಲ್ಲಿಜನವರಿ 1ರಿಂದ ಜುಲೈ 20ರವರೆಗೆ ವಾಡಿಕೆ ಮಳೆ 350.50 ಮಿ.ಮೀ. ಇದ್ದು ಪ್ರಸ್ತುತ 345 ಮಿ.ಮೀ ಮಳೆಯಾಗಿದೆ. ಕಳೆದ ಏಳು ದಿನಗಳಿಂದ 41 ಮಿ.ಮೀ ವಾಡಿಕೆ ಮಳೆ ಇದ್ದು 77.50 ಮಿ.ಮೀ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ 6.00 ಮಿ.ಮೀ ವಾಡಿಕೆ ಮಳೆಗೆ 13.90 ಮಿ.ಮೀ. ಅಧಿಕ ಮಳೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 159 ಮನೆಗಳಿಗೆ ಹಾನಿಯಾಗಿದ್ದು, ಈ ಪೈಕಿ ಒಂದು ಮನೆ ಸಂಪೂರ್ಣ, ನಾಲ್ಕು ಮನೆಗಳಿಗೆ ತೀವ್ರಹಾನಿ, 154 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಮೂರು ಸದಸ್ಯರ ಸಮಿತಿಯಿಂದ ಹಾನಿಯಾದ ಮನೆಗಳ ಪರಿಶೀಲನೆ ಮಾಡಲಾಗುತ್ತಿದೆ. 14 ರೈತರ 7.78 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, 5.18 ಹೆಕ್ಟೇರ್ ಬಾಳೆ, 2 ಹೆಕ್ಟೇರ್ ಬೆಳ್ಳುಳ್ಳಿ ಹಾಗೂ 0.60 ಹೆಕ್ಟೇರ್ ಹಾಗಲಕಾಯಿ ಬೆಳೆಗೆ ತೊಂದರೆಯಾಗಿದೆ ಎಂದು ತಿಳಿಸಿದರು.