ದಾವಣಗೆರೆ:ದಾವಣಗೆರೆ ಜಿಲ್ಲೆಯ ಏಕೈಕ ಟೋಲ್ ಗೇಟ್ನಲ್ಲಿ ಈ ಹಿಂದೆ, ಸ್ಥಳೀಯ ವಾಹನಗಳಿಗೆ ಟೋಲ್ ಸಿಬ್ಬಂದಿ ಕಡಿಮೆ ಹಣ ವಸೂಲಿ ಮಾಡುತ್ತಿದ್ದರು. ಆದರೆ, ಈ ಟೋಲ್ನ ಟೆಂಡರ್ ಬದಲಾವಣೆ ಆಗಿರುವ ಹಿನ್ನೆಲೆ ಸ್ಥಳೀಯ ವಾಹನಗಳಿಗೂ ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಹೆಚ್ಚು ಹಣ ವಸೂಲಿ ಮಾಡುತ್ತಿರುವುದಕ್ಕೆ ಸ್ಥಳೀಯ ವಾಹನ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ.
ದಾವಣಗೆರೆ ತಾಲೂಕಿನ ಹೆಬ್ಬಾಳ ಗ್ರಾಮದ ಬಳಿ ಇರುವ ಟೋಲ್ ಗೇಟ್ನಲ್ಲಿ ಸ್ಥಳೀಯ ವಾಹನ ಹಾಗೂ ಜಿಲ್ಲೆಯ ಹೊರ ಭಾಗದ ವಾಹನಗಳಿಗೆ ಒಂದೇ ದರ ನಿಗದಿ ಮಾಡಿ ಹಣ ವಸೂಲಿ ಮಾಡಲಾಗುತ್ತಿದೆ. ಸ್ಥಳೀಯ ವಾಹನ, ಲಾರಿಗಳ ದಾಖಲೆ ಕೊಟ್ಟು ನೋಂದಣಿ ಮಾಡಿಸಿದವರಿಂದಲೂ ಹೆಚ್ಚು ಹಣ ಪಡೆಯಲಾಗುತ್ತಿದೆ. ಈ ಮೊದಲು ಟೋಲ್ನಲ್ಲಿ ನೋಂದಣಿ ಮಾಡಿಸಿದ ಸ್ಥಳೀಯ ಲಾರಿಗಳಿಗೆ ಕಡಿಮೆ ಹಣ ಅಂದರೆ, 200 ರೂ. ಮಾತ್ರ ವಸೂಲಿ ಮಾಡಲಾಗುತ್ತಿತ್ತು. ಇದೀಗ ಟೆಂಡರ್ ಬದಲಾವಣೆ ಆಗಿದ್ದರಿಂದ ಟೆಂಡರ್ ಪಡೆದ ಏಜೆನ್ಸಿಯವರು ಇದೀಗ ಹೆಚ್ಚು ದರ ಮಾಡಿದ್ದಾರೆಂದು ಲಾರಿ ಮಾಲೀಕರು ಆರೋಪ ಮಾಡಿದ್ದಾರೆ.
"ಟೋಲ್ ಸಿಬ್ಬಂದಿ ಹೆಚ್ಚು ಹಣ ಪಡೆಯುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ನಮ್ಮ ಸಿಬ್ಬಂದಿ ಕಳುಹಿಸಿ ಪರಿಶೀಲನೆ ನಡೆಸಲಾಗುವುದು" ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಎಂ.ವಿ ಅವರು ಈಟಿವಿ ಭಾರತಕ್ಕೆ ತಿಳಿಸಿದರು.