ಬೆಂಗಳೂರು: ಲೇಖಕನಾದವನು ಸ್ವತಂತ್ರವಾಗಿ ಚಿಂತಿಸಬೇಕು, ಅವನಿಗನ್ನಿಸಿದ್ದನ್ನು ಬರೆಯಬೇಕು. ಅನೇಕ ಪಂಥಗಳು, ಸಿದ್ಧಾಂತಗಳ ಕುರಿತು ಬರೆದುಕೊಂಡು ಚರ್ಚಿಸುತ್ತಾ ಬಂದಿದ್ದೇವೆ. ಆದರೆ ಈಗ ಸಾಮಾಜಿಕ ಜಾಲತಾಣ ಅವೆಲ್ಲವನ್ನೂ ಮೀರಿ ಯಾರಿಂದಲೂ ಪ್ರತಿಬಂಧಿಸಲಾಗದ ಕ್ಷೇತ್ರವಾಗಿ ಮುಂದುವರೆಯುತ್ತಿರುವುದು ಎಲ್ಲ ಚಿಂತನೆಗಳಿಗೂ ಸವಾಲಾಗಿದೆ ಎಂದು ಸಾಹಿತಿ, ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಎನ್.ಆರ್.ಕಾಲೊನಿ ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ಅಂಕಿತ ಪುಸ್ತಕ ಪ್ರಕಾಶನ ಮತ್ತು ಬುಕ್ ಬ್ರಹ್ಮ ಸಹಯೋಗದಲ್ಲಿ ಭಾನುವಾರ ಗುರುಪ್ರಸಾದ ಕಾಗಿನೆಲೆ ಬರೆದ ಕಾದಂಬರಿ ‘ಸತ್ಕುಲಪ್ರಸೂತರು’, ಸಂತೋಷ್ ಅನಂತಪುರ ರಚಿತ ಕಥಾ ಸಂಕಲನ ‘ತೃಷೆ’, ಮೌನೇಶ ಬಡಿಗೇರ ವಿರಚಿತ ಕಾದಂಬರಿ ‘ಜೀವ ಜಾತ್ರೆ’, ಸುಶೀಲಾ ಡೋಣೂರ ಬರೆದಿರುವ ಕಾದಂಬರಿ ‘ಪೀಜಿ’ ಕೃತಿಯ ಲೋಕಾರ್ಪಣಾ ಸಮಾರಂಭ ನಡೆಯಿತು.
ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ನಾನು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗುವುದನ್ನು, ವಿಮರ್ಶೆ- ಮುನ್ನುಡಿ ಬರೆಯುವುದನ್ನು ನನ್ನದೇ ಕಾರಣಕ್ಕೆ ಕಡಿಮೆ ಮಾಡಿಕೊಂಡಿದ್ದೇನೆ. ಸಾಹಿತಿಗಳು ಇದನ್ನು ಹೊರತುಪಡಿಸಿ ಜಿಜ್ಞಾಸೆ ಬೆಳೆಸಿಕೊಳ್ಳಬೇಕು ಎನ್ನುವುದು ನನ್ನ ಅಭಿಮತ. ಇದರ ಹೊರತಾಗಿ ಇಂದು ನಾಲ್ಕು ಕೃತಿಗಳ ಬಿಡುಗಡೆ ಸಮಾರಂಭಕ್ಕೆ ಬಂದಿರುವುದು ಸಂತಸ ತಂದಿದೆ. ಏಕೆಂದರೆ ಲೇಖಕರು ಪ್ರಾತಿನಿಧಿಕವಾಗಿ ಇವತ್ತಿನ ಕನ್ನಡ ಸಾಹಿತ್ಯವನ್ನು ಪ್ರತಿನಿಧಿಸಿದ್ದಾರೆ. ನಾಲ್ಕು ಪುಸ್ತಕಗಳಲ್ಲಿ ಬರವಣಿಗೆ ಸಾಗಿದ್ದು, ಪ್ರತಿಯೊಬ್ಬ ಲೇಖಕರ ವಿಭಿನ್ನ ದೃಷ್ಠಿಕೋನ ಅನಾವರಣಗೊಂಡಿರುವುದು ಉತ್ತಮವಾಗಿದೆ ಎಂದು ತಿಳಿಸಿದರು.
ಬಿಡುಗಡೆಯಾದ ಪುಸ್ತಕಗಳ ಕುರಿತು ಲೇಖಕ, ಪತ್ರಕರ್ತ ಜೋಗಿ ಮಾತನಾಡಿ, ಈಗಿನ ಕಾಲಮಾನದಲ್ಲಿ ಸಾಮಾಜಿಕ ಜಾಲತಾಣಗಳ ವಿಪರೀತ ಉಪಯೋಗ ಪುಸ್ತಕಗಳ ಕುರಿತ ನಿರಾಸಕ್ತಿಗೆ ಕಾರಣವಾಗಿದೆ. ಪುಸ್ತಕವನ್ನು ಕೈಯಲ್ಲಿ ಹಿಡಿದಿಕೊಂಡು ಓದಲು ಪ್ರರಂಭಿಸಿದರೂ ಅವಸರದ ಜೀವನ ಶೈಲಿ ಮತ್ತು ಸಮಾಜಿಕ ಜಾಲತಾಣದ ಪ್ರಭಾವದಿಂದ ಲೇಖನಕ್ಕೆ ನ್ಯಾಯ ಸಿಗುವುದಿಲ್ಲ ಎಂದು ಹೇಳಿದರು.
ತೃಷೆಯ ಎಲ್ಲಾ ಕತೆಗಳಲ್ಲಿ ಒಂದು ತರಹದ ದಾಹ ಅಡಕವಾಗಿದೆ. ಬಹಳ ಸೊಗಸಾಗಿ ಕತೆಗೆ ತಕ್ಕ ಶೀರ್ಷಿಕೆಯನ್ನು ಕೊಡಲಾಗಿದೆ. ಇಲ್ಲಿ ನಗರದ ಒಳಸುಳಿವುಗಳಿದ್ದು, ಬೇರೆ ಬೇರೆ ಕಾರಣಗಳಿಂದ ನನಗೆ ಈ ಕೃತಿ ಇಷ್ಟವಾಗಿದೆ. ಇನ್ನು ಗುರುಪ್ರಸಾದ ಕಾಗಿನೆಲೆ ಅವರ ಕಾದಂಬರಿಯಲ್ಲಿ ವಿಭಿನ್ನ ಶೈಲಿಯಿದೆ. ಒಟ್ಟಾರೆ ಕೃತಿಯು ಪ್ರಶ್ನೆಗಳನ್ನ ಹಾಕುತ್ತಾ, ಅದಕ್ಕೆ ತಕ್ಕಂತಹ ಉತ್ತರಗಳ ದಾಟಿಯಲ್ಲಿ ಸಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತೆ ಎಸ್.ರಶ್ಮಿ ಮಾತನಾಡಿ, ಮೌನೇಶ ಬಡಿಗೇರ್ ರಚಿತ ಜೀವಜಾತ್ರೆ ಕಾಮದಿಂದ, ಪ್ರೀತಿಯವರೆಗೂ ಎಲ್ಲವೂ ಸೇರಿದೆ. ಕಾದಂಬರಿ ಸಾವಿರಾರು ವರ್ಷಗಳ ಹಿಂದೆ ಹೋಗಿ, ಮನುಷ್ಯನ ಅಗತ್ಯತೆಯನ್ನು ಕುರಿತು ಹೇಳುತ್ತದೆ. ಸುಶೀಲಾ ಡೋಣೂರ ಅವರ ಪೀಜಿ ಕಾದಂಬರಿ ಸಮಾಜ ನಮ್ಮನ್ನು ನೋಡುವ ಹಾಗೂ ನಮ್ಮನ್ನು ನಡೆಸಿಕೊಳ್ಳುವ ರೀತಿಯ ನಡುವೆ ನಮ್ಮ ತನವನ್ನು ನಾವು ಹೇಗೆ ಉಳಿಸಿಕೊಳ್ಳಬೇಕು ಎನ್ನುವುದನ್ನು ತಿಳಿಸುತ್ತದೆ. ಪ್ರೀತಿ ಪ್ರೇಮದ ವಿಚಾರಗಳೊಂದಿಗೆ ಚೌಕಟ್ಟಿನ ಬಗ್ಗೆಯೂ ಪಾತ್ರಗಳು ಮಾತನಾಡುತ್ತವೆ. ಅಂತಃಕರಣಕ್ಕಾಗಿ ಪರಿತಪಿಸುವ ಪರಿಯೂ ಕಾಣಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಪಠ್ಯಪುಸ್ತಕದಲ್ಲಿ ಬಸವೇಶ್ವರರ ಚರಿತ್ರೆಯಲ್ಲಿ ಲೋಪದೋಷಗಳು: ವೀರಶೈವ ಶಿವಾಚಾರ್ಯರಿಂದ ಅಸಮಾಧಾನ - TEXTBOOK