ಬೆಂಗಳೂರು:ಸಂವಿಧಾನ ಹಾಗೂ ತುರ್ತು ಪರಿಸ್ಥಿತಿ ಕುರಿತ ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತ ಪಕ್ಷ ಮತ್ತು ಬಿಜೆಪಿ ಸದಸ್ಯರ ನಡುವೆ ಏರಿದ ಧ್ವನಿಯಲ್ಲಿ ಆರೋಪ, ಪ್ರತ್ಯಾರೋಪ ನಡೆದು ಗೊಂದಲದ ವಾತಾವರಣ ಉಂಟಾದ ಹಿನ್ನೆಲೆಯಲ್ಲಿ ವಿಧಾನಸಭೆ ಕಲಾಪವನ್ನು ಹತ್ತು ನಿಮಿಷಗಳ ಕಾಲ ಮುಂದೂಡಲಾಯಿತು.
ಪ್ರತಿಪಕ್ಷ ನಾಯಕ ಆರ್.ಅಶೋಕ ಅವರು, "ವಿಧಾನಸಭೆಯ ಸಭಾಂಗಣದಲ್ಲಿ ಭಾರತ ಸಂವಿಧಾನದ ಪ್ರಸ್ತಾವನೆಯುಳ್ಳ ಎರಡು ಫಲಕ ಅಳವಡಿಸಿದ್ದು, ಅವುಗಳ ಪಕ್ಕದಲ್ಲಿ ರಾಷ್ಟ್ರ ಧ್ವಜ ಹಾಕಲಾಗಿದೆ. ಇದಕ್ಕಾಗಿ ಸಭಾಧ್ಯಕ್ಷರನ್ನು ಅಭಿನಂದಿಸುತ್ತೇವೆ. ಸಂವಿಧಾನವನ್ನು ನೋಡುವುದರಿಂದ ನಮಗೆ ಪ್ರೇರಣೆ ದೊರೆಯಲಿದೆ" ಎಂದರು.
ಆಗ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, "ಸಂವಿಧಾನದ ಬಗ್ಗೆ ಅಶೋಕ್ ಅವರು ಕಾಳಜಿ ವಹಿಸಿರುವುದಕ್ಕೆ ಅಭಿನಂದನೆ ಸಲ್ಲಿಸುವುದಾಗಿ" ಹೇಳಿದರು. ಇದಕ್ಕೆ ಅಶೋಕ್ ಅವರು "ತುರ್ತು ಪರಿಸ್ಥಿತಿ ಹೇರಿದವರು ನೀವು" ಎಂದು ತಿರುಗೇಟು ನೀಡಿದರು. ಡಿ.ಕೆ. ಶಿವಕುಮಾರ್ ಮಾತನಾಡಿ, "ತುರ್ತು ಪರಿಸ್ಥಿತಿಯ ನಂತರ ಇಂದಿರಾಗಾಂಧಿ , ನರಸಿಂಹರಾವ್, ರಾಜೀವ್ ಗಾಂಧಿ ಹಾಗೂ ಮನಮೋಹನ್ ಸಿಂಗ್ ಪ್ರಧಾನಿಯಾಗಿ ಒಳ್ಳೆಯ ಆಡಳಿತ ನೀಡಿದರು" ಎಂದು ಸಮರ್ಥನೆ ಮಾಡಿಕೊಳ್ಳುವ ಪ್ರಯತ್ನ ಮಾಡಿದರು.
ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಬಿಜೆಪಿ ಹಿರಿಯ ಶಾಸಕ ಎಸ್. ಸುರೇಶ್ ಕುಮಾರ್ ಅವರು, "ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಬಂಧಿತನಾಗಿ ಏರೋಪ್ಲೇನ್ ರುಚಿ ಕಂಡವನು ನಾನು. 21 ತಿಂಗಳ ಕಾಲ ಕರಾಳ ಇಮೇಜ್ನಿಂದ ಹೊರ ಬರಲು ಸಾಧ್ಯವಾಗಲಿಲ್ಲ"ವೆಂದು ಏರಿದ ಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, "ಅಘೋಷಿತ ತುರ್ತು ಪರಿಸ್ಥಿತಿ ನಿಮ್ಮ 10 ವರ್ಷಗಳ ಆಡಳಿತದಲ್ಲಿ ಜಾರಿಗೆ ತಂದಿದ್ದೀರಿ. ಐಟಿ, ಇಡಿ, ಸಿಬಿಐ ಅನ್ನು ದುರುಪಯೋಗಪಡಿಸಿಕೊಂಡಿದ್ದೀರಿ. ಸಂವಿಧಾನದ ಬಗ್ಗೆ ಮಾತನಾಡಲು ನಿಮಗೆ ನೈತಿಕತೆ ಇಲ್ಲವೆಂದು" ತಿರುಗೇಟು ನೀಡಿದರು.
ಸಚಿವರಾದ ಕೆ.ಜೆ. ಜಾರ್ಜ್, ಡಾ. ಎಂ.ಸಿ. ಸುಧಾಕರ್ ಸೇರಿದಂತೆ ಇತರ ಅಡಳಿತ ಪಕ್ಷದ ಸದಸ್ಯರು ಮಾತನಾಡಲು ಮುಂದಾದರು. ಆಗ ಬಿಜೆಪಿಯ ಹಲವು ಶಾಸಕರು ಪ್ರತಿಯಾಗಿ ಮಾತನಾಡಲು ಮುಂದಾದಾಗ, ಸದನದಲ್ಲಿ ಗದ್ದಲ, ಗೊಂದಲದ ವಾತಾವರಣ ನಿರ್ಮಾಣವಾಯಿತು. ಈ ಹಂತದಲ್ಲಿ ಮತ್ತೆ ಮಧ್ಯ ಪ್ರವೇಶಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, "ಸಂವಿಧಾನ ಉಳಿಯಬೇಕು. ಅದನ್ನು ರಕ್ಷಣೆ ಮಾಡಬೇಕೆಂಬ ಉದ್ದೇಶದಿಂದ ಶಾಲೆಗಳಲ್ಲಿ ಪಠಣ ಮಾಡಲಾಗುತ್ತದೆ. ಸಂವಿಧಾನದ ರಕ್ಷಣೆ ಕೆಲಸವನ್ನು ಬಿಜೆಪಿಯವರೆಲ್ಲರೂ ಮಾಡಲಿ" ಎಂದು ಒತ್ತಾಯಿಸಿದರು.
ಆಗ ಬಿಜೆಪಿ ಸದಸ್ಯರು, "ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್" ಎಂದು ಛೇಡಿಸಿದರು. ಪ್ರತಿಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ ಮಾತನಾಡಿ, "ವಿಧಾನಸಭೆ ಸಭಾಂಗಣದಲ್ಲಿ ಹೊಸ ರೀತಿಯ ಸ್ವರೂಪ, ಕಾರ್ಯಕಲಾಪವನ್ನು ಜಾರಿ ಮಾಡಿದ್ದಾರೆ. ಬೆಳಗ್ಗೆ 9 ಗಂಟೆಗೆ ಅಧಿವೇಶನ ಕರೆಯುವುದು, ತಿಂಡಿ, ಊಟ ವ್ಯವಸ್ಥೆ ಮಾಡುವುದು. ವಿಧಾನಸಭೆಯ ಘನತೆ, ಗೌರವ ಹೆಚ್ಚುವ ರೀತಿಯಲ್ಲಿ ಮಾಡಿದ್ದಾರೆ. ಅದಕ್ಕಾಗಿ ಅಭಿನಂದಿಸುವುದಾಗಿ" ಹೇಳಿದರು.
ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ಮಾತಿನ ಸಮರವನ್ನು ಗಮನಿಸಿದ ಸಭಾಧ್ಯಕ್ಷ ಯು.ಟಿ. ಖಾದರ್ ಅವರು, "ದೊಣ್ಣೆ ಕೊಟ್ಟು ಪೆಟ್ಟು ತಿನ್ನುವಂತಾಗಿದೆ. ಸಂವಿಧಾನದ ಕುರಿತು ಒಂದು ದಿನ ಚರ್ಚೆ ಮಾಡೋಣ. ಒಬ್ಬೊಬ್ಬರಲ್ಲೂ ಒಂದೊಂದು ರೀತಿ ಅಭಿಪ್ರಾಯವಿದೆ. ಚರ್ಚೆ ಮಾಡೋಣ" ಎಂದರು.
"ಕರಾವಳಿಯನ್ನು ಸ್ಮಗ್ಲರ್ಗಳು ಆಳುತ್ತಿದ್ದರು. ಅದನ್ನು ನಿಗ್ರಹಿಸಿದ್ದು ಇಂದಿರಾಗಾಂಧಿ" ಅವರು ಎಂದು ಹೇಳುತ್ತಿದ್ದಂತೆಯೇ ಬಿಜೆಪಿ ಸದಸ್ಯ ಆರಗ ಜ್ಞಾನೇಂದ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿ, "ದೇಶಭಕ್ತರನ್ನು ಜೈಲಿನಲ್ಲಿಟ್ಟಿದ್ದರು. ಇಡೀ ದೇಶವನ್ನೇ ಜೈಲು ಮಾಡಿದ್ದರು. ಸಾಮಾನ್ಯ ಜನರಿಗೆ ಕಿರುಕುಳವಾಯಿತು. ಎಳೆದೊಯ್ದು ಕುಟುಂಬ ಕಲ್ಯಾಣ ಯೋಜನೆ ಜಾರಿ ಮಾಡಲಾಯಿತು" ಎಂದು ಆಕ್ರೋಶ ಹೊರಹಾಕಿದರು.
ಈ ವೇಳೆ ಆರ್. ಅಶೋಕ್ ಮಾತನಾಡಿ, "ಪೀಠದಿಂದ ಸಮರ್ಥನೆ ಮಾಡುವುದು ಬೇಡ" ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರ ನಡುವೆ ಏರಿದ ಧ್ವನಿಯಲ್ಲಿ ವಾಗ್ವಾದ ನಡೆಯಿತು. ಇಂಧನ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, "ಸಂವಿಧಾನ ಬಾಹಿರವಾಗಿ ಕೆಲಸ ಮಾಡಿದವರ ವಿರುದ್ಧ ಕ್ರಮವಾಗಿದೆ. ನೀವು ಸಂವಿಧಾನಕ್ಕೆ ವಿರುದ್ಧವಾಗಿರುವವರು. ಅದಕ್ಕೆ ನಿಮಗೆ ಜನರು ಸರಿಯಾದ ಬುದ್ಧಿ ಕಲಿಸಿದ್ದಾರೆ" ಎಂದು ತಿರುಗೇಟು ನೀಡಿದರು.
ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಮಾತನಾಡಿ, "ತುರ್ತು ಪರಿಸ್ಥಿತಿಯ ನಂತರವೂ ಇಂದಿರಾಗಾಂಧಿ ಅವರು ಆಡಳಿತ ನಡೆಸಿದ್ದಾರೆ" ಎಂದರು.
ಈ ಹಂತದಲ್ಲಿ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ ಮಾತನಾಡುತ್ತಾ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರನ್ನು ಉದ್ದೇಶಿಸಿ ಬಳಸಿದ ಶಬ್ಧ ಬಿಜೆಪಿ ಶಾಸಕರನ್ನು ಮತ್ತಷ್ಟು ಕೆರಳಿಸಿತು. ಈ ವೇಳೆ ಬಿಜೆಪಿ ಶಾಸಕರಾದ ಸಿದ್ದು ಸವದಿ, ಚನ್ನಬಸಪ್ಪ ಮತ್ತಿತರರು ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಆಡಳಿತ ಪಕ್ಷದ ಸದಸ್ಯರು ಅದೇ ರೀತಿ ಏರಿದ ಧ್ವನಿಯಲ್ಲಿ ಮಾತನಾಡಲು ಮುಂದಾದಾಗ, "ಸದನಲ್ಲಿ ಗದ್ದಲ, ಗೊಂದಲ ನಿರ್ಮಾಣವಾಗಿ, ಯಾರು ಏನು ಮಾತನಾಡುತ್ತಿದ್ದಾರೆ ಎಂಬುದೇ ಕೇಳಿಸದಂತಾಯಿತು. ಆಗ ಸಭಾಧ್ಯಕ್ಷರು ಸದನದಲ್ಲಿ ಕಾರ್ಯಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದರು.
ಇದನ್ನೂ ಓದಿ:ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರಬಾರದೆಂದು ಕೇಂದ್ರ ವಾಮಮಾರ್ಗ ಅನುಸರಿಸುತ್ತಿದೆ: ಸಿಎಂ ಸಿದ್ದರಾಮಯ್ಯ - CM Siddaramaiah