ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದ ರಾಣಿ ಎಂಬ ಹೆಸರಿನ ಹುಲಿಯು ಎರಡು ಮರಿಗಳಿಗೆ ಡಿಸೆಂಬರ್ 20 ರಂದು ಜನ್ಮ ನೀಡಿದೆ.
14 ವರ್ಷದ "ರಾಣಿ" ಹುಲಿಯು ರಾತ್ರಿ ಎರಡು ಮರಿಗಳಿಗೆ ಜನ್ಮನೀಡಿದೆ. ತಾಯಿ ಮತ್ತು ಮರಿಗಳು ಆರೋಗ್ಯವಾಗಿದೆ. ಮೃಗಾಲಯದ ಅಧಿಕಾರಿಗಳು ಹುಲಿ ಹಾಗೂ ಮರಿಗಳ ಬಗ್ಗೆ ವಿಶೇಷ ಗಮನ ಹರಿಸುತ್ತಿದ್ದಾರೆ. ರಾಣಿಗೆ ಅಗತ್ಯ ಆಹಾರ ಮತ್ತು ಪೂರಕ ಆಹಾರ (Supplements)ಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.
ರಾಣಿ ಹುಲಿಯು 2016ರಲ್ಲಿ ಐದು ಆರೋಗ್ಯವಂತ ಮರಿಗಳಿಗೆ ಜನ್ಮ ನೀಡಿ ದಾಖಲೆ ಮಾಡಿತ್ತು. ಬಳಿಕ 2021 ರಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿತ್ತು. "ರಾಣಿ"ಯನ್ನು ಬನ್ನೇರುಘಟ್ಟ ಮೃಗಾಲಯದಿಂದ ಪ್ರಾಣಿ ವಿನಿಮಯದ ಮೂಲಕ ತರಲಾಗಿದೆ. ಈ ಸಂದರ್ಭ ಪಿಲಿಕುಲ ಮೃಗಾಲಯದಿಂದ ಒಂದು ಗಂಡು ಹುಲಿಯನ್ನು ನೀಡಲಾಗಿತ್ತು. ಈ ಮೂಲಕ ಪಿಲಿಕುಲ ಮೃಗಾಲಯದಲ್ಲಿ ಹುಲಿಗಳ ಸಂಖ್ಯೆ 10ಕ್ಕೇರಿದೆ. ಸದ್ಯ 4 ಗಂಡು ಮತ್ತು 4 ಹೆಣ್ಣು ಹುಲಿಗಳಿದೆ. ಈಗ ತಾನೇ ಹುಟ್ಟಿರುವ ಮರಿಗಳ ಲಿಂಗವನ್ನು ಎರಡು ತಿಂಗಳ ನಂತರ ಗುರುತಿಸಲಾಗುವುದು ಎಂದು ತಿಳಿಸಿದ್ದಾರೆ.
ಹುಲಿ ಮರಿಗಳಿಗೆ ಒಂದೂವರೆ ತಿಂಗಳ ಬಳಿಕ ರೋಗ ನಿರೋಧಕ ಲಸಿಕೆಯನ್ನು ನೀಡಲಾಗುವುದು. ಅಲ್ಲಿಯವರೆಗೆ ಮರಿಗಳ ಆರೋಗ್ಯವು ಅತೀ ಸೂಕ್ಷ್ಮವಾಗಿರುವುದರಿಂದ ತುಂಬಾ ನಿಗಾವಹಿಸಬೇಕಾಗುತ್ತದೆ. ಅಗತ್ಯ ಸಿಬ್ಬಂದಿಯನ್ನು ಹೊರತುಪಡಿಸಿ ಹುಲಿಗಳ ಮನೆಯ ಸಮೀಪಕ್ಕೆ ಯಾರು ಪ್ರವೇಶಿಸದಂತೆ ಆದೇಶವನ್ನು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ತ್ಯಾವರೆಕೊಪ್ಪ ಹುಲಿ - ಸಿಂಹಧಾಮಕ್ಕೆ ಕೇರಳದಿಂದ ಐದು ಹೊಸ ಅತಿಥಿಗಳ ಆಗಮನ : ಪ್ರಾಣಿ ಪ್ರಿಯರು ಫುಲ್ ಖುಷ್ - TYAVAREKOPPA SANCTUARY