ದಾವಣಗೆರೆ:ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಿವೆ. ಇದರೊಂದಿಗೆ ಲೋಕ ಸಮರಕ್ಕೆ ದಾವಣಗೆರೆ ಚುನಾವಣಾ ಕ್ಷೇತ್ರದ ಅಖಾಡ ಸಿದ್ಧವಾಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ಜೊತೆಗೆ ಚುನಾವಣಾ ಕಾವು ಸಹ ಜೋರಾಗುತ್ತಿದೆ. ಸತತ ನಾಲ್ಕು ಬಾರಿ ಗೆಲುವು ಸಾಧಿಸಿರುವ ಬಿಜೆಪಿಯ ಜಿ.ಎಂ.ಸಿದ್ದೇಶ್ವರ್ ಈ ಬಾರಿ ಲೋಕ ಕಣದಿಂದ ಹಿಂದೆ ಸರಿದು, ತಮ್ಮ ಪತ್ನಿಗೆ ಟಿಕೆಟ್ ಕೊಡಿಸಿದ್ದಾರೆ. ಈ ಮೂಲಕ ಒಂದೇ ಕುಟುಂಬಕ್ಕೆ ಒಟ್ಟಾರೆ ಎಂಟು ಬಾರಿ ಬಿಜೆಪಿ ಮಣೆ ಹಾಕಿದಂತಾಗಿದೆ.
ಬೆಣ್ಣೆನಗರಿ ಖ್ಯಾತಿಯ ದಾವಣಗೆರೆಯಲ್ಲಿ ರಾಜಕೀಯವಾಗಿ ಜಿ.ಎಂ.ಸಿದ್ದೇಶ್ವರ್ ಹಾಗೂ ಶಾಮನೂರು ಶಿವಶಂಕರಪ್ಪ ಕುಟುಂಬಗಳ ಮಧ್ಯೆ ಜಿದ್ದಾಜಿದ್ದಿ ಇದೆ. ಈ ಸಲದ ಲೋಕಸಭೆ ಚುನಾವಣೆಗೂ ಈ ಎರಡು ಕುಟುಂಬಗಳ ನಡುವೆಯೇ ಪೈಪೋಟಿ ಏರ್ಪಟ್ಟಿದೆ. ವಿಶೇಷವೆಂದರೆ, ಈ ಬಾರಿ ಎರಡು ಕುಟುಂಬಗಳ ಮಹಿಳೆಯರು ಅದೃಷ್ಟದ ಪರೀಕ್ಷೆಗೆ ಇಳಿದಿದ್ದಾರೆ. ಈ ಬಾರಿ ಜಿ.ಎಂ.ಸಿದ್ದೇಶ್ವರ್ ಅವರಿಗೆ ಟಿಕೆಟ್ ನೀಡಬಾರದು ಎಂದು ಪಕ್ಷದ ವಲಯದಲ್ಲೇ ಅಪಸ್ವರ ಎದ್ದಿತ್ತು. ವಿರೋಧದ ನಡುವೆಯೂ ಸಿದ್ದೇಶ್ವರ್ ತಮ್ಮ ಬದಲಿಗೆ ಪತ್ನಿ ಗಾಯಿತ್ರಿ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಸಫಲರಾಗಿದ್ದಾರೆ. ಮತ್ತೊಂದೆಡೆ, ಕಾಂಗ್ರೆಸ್ ಪಕ್ಷದಿಂದ ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಟಿಕೆಟ್ ಘೋಷಿಸಲಾಗಿದೆ. ಹಿರಿಯ ಶಾಸಕರಾದ ಶಾಮನೂರು ಶಿವಶಂಕರಪ್ಪನವರ ಸೊಸೆ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪತ್ನಿ ಪ್ರಭಾ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.
ಮೇಲುಗೈಯತ್ತ ಬಿಜೆಪಿ, ಕಾಂಗ್ರೆಸ್ ಚಿತ್ತ: 1977ರಿಂದ 2019ರವರೆಗೆ ಒಟ್ಟು 12 ಲೋಕಸಭಾ ಚುನಾವಣೆಗಳನ್ನು ದಾವಣಗೆರೆ ಕ್ಷೇತ್ರ ಕಂಡಿದೆ. ಇದರಲ್ಲಿ ಕಾಂಗ್ರೆಸ್ 6 ಬಾರಿ ಗೆಲುವು ಸಾಧಿಸಿದ್ದರೆ, ಬಿಜೆಪಿ 6 ಬಾರಿ ಜಯ ದಾಖಲಿಸಿ ಸಮಬಲ ಸಾಧಿಸಿವೆ. ಈ ಬಾರಿ ಗೆದ್ದು ಮೇಲುಗೈ ಸಾಧಿಸುವತ್ತ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳ ಚಿತ್ತ ನೆಟ್ಟಿದೆ. ಅದರಲ್ಲೂ, ಬಿಜೆಪಿಯಿಂದ ಸಿದ್ದೇಶ್ವರ್ ಅವರ ಕುಟುಂಬವೇ 6 ಸಲವೂ ಆಯ್ಕೆಯಾಗಿದೆ. ಇದರಲ್ಲಿ ಎರಡು ಬಾರಿ ಸಿದ್ದೇಶ್ವರ್ ತಂದೆ ಜಿ.ಮಲ್ಲಿಕಾರ್ಜುನಪ್ಪ ಗೆದ್ದಿದ್ದರೆ, ನಾಲ್ಕು ಬಾರಿ ಸಿದ್ದೇಶ್ವರ್ ಗೆಲುವು ಕಂಡಿದ್ದಾರೆ.
ದಾವಣಗೆರೆ ಲೋಕಸಭೆ ಕ್ಷೇತ್ರ ರಚನೆಯಾದ ಬಳಿಕ 1977ರಲ್ಲಿ ಕಾಂಗ್ರೆಸ್ನಿಂದ ಕೊಂಡಜ್ಜಿ ಬಸಪ್ಪ ಗೆಲುವು ದಾಖಲಿಸಿದ್ದರು. ನಂತರದ ನಾಲ್ಕು ಅವಧಿಗಳಿಗೂ ಕಾಂಗ್ರೆಸ್ ಪಕ್ಷವೇ ಕ್ಷೇತ್ರದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತ್ತು. 1980ಲ್ಲಿ ಕಾಂಗ್ರೆಸ್ನ ಟಿ.ವಿ.ಚಂದ್ರಶೇಖರಪ್ಪನವರ ಬಳಿಕ 1984, 1989, 1991ರ ಚುನಾವಣೆಯಲ್ಲಿ ಚನ್ನಯ್ಯ ಒಡೆಯರ್ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಬಾರಿಸಿದ್ದರು. ಆದರೆ, 1996ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಈ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಟ್ಟಿತ್ತು. ಆಗ ಬಿಜೆಪಿಯಿಂದ ಸ್ಪರ್ಧಿಸಿದ್ದ ಸಿದ್ದೇಶ್ವರ್ ಅವರ ತಂದೆ ಜಿ.ಮಲ್ಲಿಕಾರ್ಜುನಪ್ಪ ಜಯ ದಾಖಲಿಸಿದ್ದರು. ಆದರೆ, 1998ರಲ್ಲಿ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರವನ್ನು ಕಾಂಗ್ರೆಸ್ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಆಗ ಜಿ.ಮಲ್ಲಿಕಾರ್ಜುನಪ್ಪ ವಿರುದ್ಧ ಶಾಮನೂರು ಶಿವಶಂಕರಪ್ಪ ಆಯ್ಕೆಯಾಗಿದ್ದರು. ಬಿಜೆಪಿಯ ಮಲ್ಲಿಕಾರ್ಜುನಪ್ಪ ಪರಾಭವಗೊಂಡಿದ್ದರು.
ಇದರ ಮರು ವರ್ಷವೇ ಎಂದರೆ, 1999ರಲ್ಲಿ ನಡೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನಪ್ಪ ಗೆಲುವಿನ ನೆಗೆ ಬೀರಿದ್ದರು. ಅಲ್ಲಿಂದ ಮತ್ತೆ ಕಾಂಗ್ರೆಸ್ ಗೆಲುವಿನ ಲಯಕ್ಕೆ ಮರಳಲು ಸಾಧ್ಯವಾಗಿಲ್ಲ. 2004 ರಿಂದ 2019ರವರೆಗೂ ಮಲ್ಲಿಕಾರ್ಜುನಪ್ಪ ಮಗ ಸಿದ್ದೇಶ್ವರ್ ಸತತವಾಗಿ ನಾಲ್ಕು ಬಾರಿ ಕೂಡ ಬಿಜೆಪಿಯಿಂದಲೇ ಗೆಲುವು ದಾಖಲಿಸಿದ್ದರು. ಈಗ 7ನೇ ಗೆಲುವಿನ ಮೇಲೆ ಕಣ್ಣಿಟ್ಟಿರುವ ಸಿದ್ದೇಶ್ವರ್ ಕುಟುಂಬಕ್ಕೆ ಶಾಮನೂರು ಕುಟುಂಬ ಪ್ರಬಲ ಎದುರಾಳಿ ಆಗಿದೆ. ಆದ್ದರಿಂದ ಈ ಬಾರಿಯ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಎರಡೂ ಕುಟುಂಬಗಳಿಂದಲೂ ಈ ಬಾರಿ ಮಹಿಳೆಯರೇ ಅಖಾಡಕ್ಕೆ ಇಳಿದಿರುವುದು ಚುನಾವಣೆಯನ್ನು ಮತ್ತಷ್ಟು ರಂಗೇರಿಸಿದೆ.