ಗಂಗಾವತಿ:ಔತಣಕೂಟದ ಬಳಿಕ ತಮಾಷೆಗೆಂದು ಹಳಿ ಮೇಲೆ ಮಲಗಿದ್ದಾಗ ರೈಲು ಹರಿದು ಮೂವರು ಯುವಕರು ಮೃತಪಟ್ಟ ಘಟನೆ ಇಲ್ಲಿನ ರೈಲ್ವೆ ಸ್ಟೇಷನ್ ಸಮೀಪ ಗುರುವಾರ ತಡರಾತ್ರಿ ನಡೆದಿದೆ.
ನಗರದ ಕಿಲ್ಲಾ ಏರಿಯಾದ ಮೌನೇಶ ಶ್ರೀನಿವಾಸ ಬೈಲ್ ಪತ್ತಾರ (23), ಅಣ್ಣೂರು ಗೌರಮ್ಮ ಕ್ಯಾಂಪಿನ ಸುನಿಲ್ ತಿಮ್ಮಣ್ಣ (23) ಹಾಗೂ ಹಿರೇಜಂತಕಲ್ನ ವೆಂಕಟ ಭೀಮರಾಯ ಮಂಗಳೂರು (20) ಮೃತಪಟ್ಟವರು.
ರೈಲ್ವೆ ಹಳಿಯ ಪಕ್ಕದಲ್ಲಿ ಯುವಕರು ಔತಣಕೂಟ ಮಾಡಿದ್ದಾರೆ. ಬಳಿಕ ತಮಾಷೆಗೆಂದು ಹಳಿಯ ಮೇಲೆಯೇ ಮಲಗಿದ್ದಾರೆ. ಈ ಸಂದರ್ಭದಲ್ಲಿ ಗಂಗಾವತಿ ಮಾರ್ಗವಾಗಿ ಹೊರಟಿದ್ದ ಹುಬ್ಬಳ್ಳಿ-ಸಿಂಧನೂರು ಪ್ಯಾಸೆಂಜರ್ ರೈಲು ಇವರ ಮೇಲೆ ಹರಿದು ಹೋಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಗದಗ ವಿಭಾಗದ ರೈಲ್ವೆ ಪೊಲೀಸರು, ಹುಬ್ಬಳ್ಳಿ-ಗದಗದ ರೈಲ್ವೆ ಪೊಲೀಸ್ ಡಿವೈಎಸ್ಪಿ ಲೋಕೇಶಪ್ಪ ನೇತೃತ್ವದ ತಂಡ, ಬೆರಳಚ್ಚು ತಜ್ಞರು, ಶ್ವಾನದಳ ಹಾಗೂ ವಿಧಿ-ವಿಜ್ಞಾನ ಪ್ರಯೋಗಾಲಯದ ತಜ್ಞರ ತಂಡ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ.
ಘಟನಾ ಸ್ಥಳದಲ್ಲಿ ಮೊಬೈಲ್, ಹೆಡ್ಫೋನ್, ಮದ್ಯದ ಬಾಟಲಿ, ಯುವಕರು ಧರಿಸಿದ್ದ ಪಾದರಕ್ಷೆ ಸೇರಿದಂತೆ ಇನ್ನಿತರ ವಸ್ತುಗಳು ಸಿಕ್ಕಿವೆ. ಎಲ್ಲಾ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತದೇಹಗಳನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಇಬ್ಬರು ಯುವಕರ ಅಂತ್ಯಸಂಸ್ಕಾರವನ್ನು ಗಂಗಾವತಿಯಲ್ಲಿ ಮಾಡಲಾಗಿದ್ದು, ಇನ್ನೋರ್ವನ ಮೃತದೇಹವನ್ನು ಕುಟುಂಬಿಕರು ಮಸ್ಕಿಗೆ ಕೊಂಡೊಯ್ದಿದ್ದಾರೆ.