ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿಂದು ನಡೆದ ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಮೂರು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಪಕ್ಷದ ನಿರ್ಣಯಗಳ ಬಗ್ಗೆ ಮಾಹಿತಿ ನೀಡಿದರು.
ಪ್ರಧಾನಿ ಮೋದಿ ಜೊತೆ ಕರ್ನಾಟಕದ ಜನತೆ ಇರಲಿದ್ದಾರೆ. ಅವರ ಎಲ್ಲ ಕೆಲಸಗಳ ಜೊತೆ ನಾವಿರಲಿದ್ದೇವೆ. ನೆಹರು ನಂತರ ಮೋದಿ ಮೂರನೇ ಬಾರಿ ಪ್ರಧಾನಿ ಆಗಿದ್ದಾರೆ. ನಾವು ಮೋದಿ ಅವರಿಗೆ ತುಂಬು ಹೃದಯದ ಸ್ವಾಗತ ಮಾಡಿದ್ದೇವೆ. ಮೋದಿ ಹ್ಯಾಟ್ರಿಕ್ ಗೆಲುವಿಗೆ ಅಭಿನಂದಿಸಿ ಕಾರ್ಯಕಾರಿಣಿಯು ಮೊದಲ ಅಭಿನಂದನಾ ನಿರ್ಣಯ ಕೈಗೊಂಡಿತು ಎಂದು ತಿಳಿಸಿದರು.
ಎರಡನೇ ನಿರ್ಣಯವಾದ ಕಾಂಗ್ರೆಸ್ ಸರ್ಕಾರ ವಿಚಾರವನ್ನು ಪ್ರತಿಪಕ್ಷ ನಾಯಕ ಅಶೋಕ್ ಮಂಡಿಸಿದರು. ರಾಜ್ಯ ಸರ್ಕಾರ ಅಭಿವೃದ್ಧಿ ಶೂನ್ಯವಾಗಿದೆ, ಭ್ರಷ್ಟಾಚಾರದಲ್ಲಿ ತೊಡಗಿದೆ. ಅಲ್ಪಸಂಖ್ಯಾತರ ಓಲೈಕೆ ಮಾಡುವ ಕೆಲಸ ಮಾಡುತ್ತಿದೆ. ಕಾನೂನು ಸುವ್ಯವಸ್ಥೆ ಹದಗೆಡಿಸಿರುವ ಬಗ್ಗೆ ಖಂಡಿಸಿದ್ದೇವೆ. ಈ ಸರ್ಕಾರಕ್ಕೆ ಮುಂದುವರೆಯುವ ನೈತಿಕ ಹಕ್ಕಿಲ್ಲ. ಸಿಎಂ ರಾಜಿನಾಮೆ ಕೊಡಬೇಕು ಅಂತಾ ಒತ್ತಾಯ ಮಾಡಿದ್ದೇವೆ ಎಂದು ಹೇಳಿದರು.