ಬೆಂಗಳೂರು:ಎಸ್.ಎಂ. ಕೃಷ್ಣ ರಾಜ್ಯ ಕಂಡ ದೂರದರ್ಶಿ, ಮುತ್ಸದ್ಧಿ, ಸಜ್ಜನ ರಾಜಕಾರಣಿ. ಮುಖ್ಯಮಂತ್ರಿಯಾಗಿ ರಾಜ್ಯವನ್ನು ಅದರಲ್ಲೂ ಬೆಂಗಳೂರನ್ನು ಐಟಿ, ಬಿಟಿ ನಗರವಾಗಿ ಇಂದು ವಿಶ್ವ ಭೂ ಪಟದಲ್ಲಿ ಪ್ರಜ್ವಲಿಸುವಂತೆ ಮಾಡುವಲ್ಲಿ ಬೀಜಾಂಕುರ ಬೆಂಬಲ ನೀಡಿ ಬೆಳೆಸಿದ್ದು ಇದೇ ಎಸ್.ಎಂ ಕೃಷ್ಣ. ಉತ್ತಮ ಆಡಳಿತ ವ್ಯವಸ್ಥೆಗೆ ಹೆಸರಾದಂತ ಹಲವಾರು ಜನಪರ, ಜನಪ್ರಿಯ ಯೋಜನೆಗಳನ್ನು ರಾಜ್ಯದ ಜನರಿಗೆ ಕೊಟ್ಟಿದ್ದ ಮಾಜಿ ಸಿಎಂ ಎಸ್.ಎಂ.ಕೃಷ್ಣರ ಆ ಮೂರು ಯೋಜನೆಗಳು ಈಗಲೂ ಕರುನಾಡಿನ ಜನಮಾನಸದಲ್ಲಿ ಅಚ್ಚಳಿಯದೇ ಉಳಿದುಕೊಂಡಿವೆ.
ಎಸ್.ಎಂ.ಕೃಷ್ಣ ರಾಜ್ಯ ಕಂಡ ದೂರದರ್ಶಿ ನಾಯಕ. ಸಜ್ಜನ, ಅಭಿವೃದ್ಧಿಯ ಮುನ್ನೋಟ ಹೊಂದಿದ ನಾಯಕ. ರಾಜ್ಯದ ಅಭಿವೃದ್ಧಿಯ ಪಥವನ್ನೇ ಬದಲಿಸಿದ ದಿಟ್ಟ ನಾಯಕರಾಗಿದ್ದರು. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿ 1999ರಿಂದ 2004ರ ವರೆಗೆ ಕರ್ನಾಟಕದ ಚುಕ್ಕಾಣಿಯನ್ನು ಹಿಡಿದಿದ್ದರು. ತಮ್ಮ ನಾಲ್ಕು ವರ್ಷದ ಆಡಳಿತದಲ್ಲಿ ಎಸ್ಎಂಕೆ ಅನೇಕ ಮೈಲಿಗಲ್ಲು ತೀರ್ಮಾನಗಳನ್ನು ಕೈಗೊಳ್ಳುವ ಮೂಲಕ ಆಡಳಿತಗಾರರಿಗೆ ಆದರ್ಶಪ್ರಾಯರಾಗಿ ಹೊರಹೊಮ್ಮಿದ್ದರು. ತಮ್ಮ ಆಡಳಿತದಲ್ಲಿ ಎಸ್.ಎಂ. ಕೃಷ್ಣ ಅನೇಕ ಜನ ಪರ ಅಭಿವೃದ್ಧಿ, ಯೋಜನೆಗಳನ್ನು ಜಾರಿಗೊಳಿಸಿ, ದಿಟ್ಟ, ಅಭಿವೃದ್ಧಿ ಮುನ್ನೋಟದ ಆಡಳಿತಕ್ಕೆ ರಹದಾರಿ ಹಾಕಿದ್ದರು.
ಬೆಂಗಳೂರಿಗೆ ಐಟಿ, ಬಿಟಿ ನಗರದ ಬ್ರಾಂಡ್ ಬರುವಂತೆ ಮಾಡಿದ ಮೂಲ ಪುರುಷ ಇದೇ ಎಸ್.ಎಂ. ಕೃಷ್ಣ. ಅವರು ಮತ್ತು ಸಿಎಂ ಸಿದ್ದರಾಮಯ್ಯ ಬೆಂಗಳೂರು ಸಿಲಿಕಾನ್ ಸಿಟಿಯಾಗುವಲ್ಲಿ ಬೀಜಾಂಕುರ ಹಾಕಿದ ದೂರದರ್ಶಿ ನಾಯಕರಾಗಿದ್ದಾರೆ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಚಿಸಿದ್ದ ತೆರಿಗೆ ಸುಧಾರಣಾ ಆಯೋಗ, ಆಡಳಿತ ಸುಧಾರಣಾ ಆಯೋಗ, ಬೆಂಗಳೂರು ಅಭಿವೃದ್ಧಿ ಕಾರ್ಯಪಡೆ, ಬಂಡವಾಳ ಹೂಡಿಕೆದಾರರ ಜಾಗತಿಕ ಸಮಾವೇಶ, ಐಟಿ ಮತ್ತು ಬಿಟಿ ಉದ್ಯಮಕ್ಕೆ ಕೊಟ್ಟ ಪ್ರೋತ್ಸಾಹ, ಗ್ರಾಮೀಣಪ್ರದೇಶದಲ್ಲಿ ವಸತಿ ನಿರ್ಮಾಣದಂತಹ ಯೋಜನೆಗಳು ಒಂದು ಸರ್ಕಾರ ಹೊಂದಿರಬೇಕಾದ ಅಭಿವೃದ್ಧಿಯ ಮುನ್ನೋಟಕ್ಕೆ ಮಾದರಿಯಾಗಿತ್ತು. ಅದರಲ್ಲೂ ಎಸ್.ಎಂ. ಕೃಷ್ಣರ ಅಧಿಕಾರಾವಧಿಯಲ್ಲಿ ಜಾರಿಗೊಳಿಸಲಾಗಿರುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟ, ರೈತರಿಗೆ ಯಶಸ್ವಿನಿ ವಿಮೆ ಯೋಜನೆ, ಸ್ತ್ರೀ ಶಕ್ತಿ ಯೋಜನೆ ಅಚ್ಚಳಿಯದೇ ಉಳಿದ ಜನಪ್ರಿಯ ಯೋಜನೆಗಳಾಗಿವೆ.
ಕ್ರಾಂತಿಕಾರಕ ಮಧ್ಯಾಹ್ನದ ಬಿಸಿಯೂಟ ಯೋಜನೆ: ಎಸ್.ಎಂ. ಕೃಷ್ಣ ಆಡಳಿತದಲ್ಲಿ ಅಚ್ಚಳಿಯದೇ ಉಳಿದಿರುವ ಕ್ರಾಂತಿಕಾರಕ ಯೋಜನೆ ಮಧ್ಯಾಹ್ನದ ಬಿಸಿಯೂಟ. ಹಸಿದ ಹೊಟ್ಟೆಯಲ್ಲಿ ಕಲಿಕೆ ಕಷ್ಟ ಎಂದು ಮನವರಿಕೆ ಮಾಡಿಕೊಂಡು ಮಧ್ಯಾಹ್ನದ ಊಟವನ್ನು ದೊಡ್ಡ ಪ್ರಮಾಣದಲ್ಲಿ ಮಕ್ಕಳಿಗೆ ದಿನನಿತ್ಯ ಒದಗಿಸುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡಿದ ಹೆಗ್ಗಳಿಕೆ ಎಸ್.ಎಂ. ಕೃಷ್ಣ ಅವರಿಗೆ ಸಲ್ಲುತ್ತದೆ. ಆ ದೂರದೃಷ್ಟಿ ಯೋಜನೆ ಈಗಲೂ ಜಾರಿಯಲ್ಲಿದ್ದು, ಮಕ್ಕಳಿಗೆ ಅಕ್ಷರ ದಾಸೋಹದ ಜೊತೆ ಅನ್ನ ದಾಸೋಹವನ್ನು ಪರಿಚಯಿಸಿಕೊಟ್ಟ ದೂರದರ್ಶಿ ಯೋಜನೆಯಾಗಿದೆ. ಈಗಲೂ ರಾಜ್ಯದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟ ಯೋಜನೆ ಮೂಲಕ ಅನ್ನ ದಾಸೋಹದ ಜೊತೆ ಅಕ್ಷರ ದಾಸೋಹದ ಮಹತ್ವವನ್ನು ಮನಗಾಣಿಸಿದರು. ಅನ್ನ ದಾಸೋಹ ಈಗ ರಾಷ್ಟ್ರೀಯ ಯೋಜನೆಯಾಗಿ ಜಾರಿಯಾಗುತ್ತಿದೆ.
ತುಮಕೂರಿನ ಸಿದ್ಧಗಂಗಾ ಮಠ ಮತ್ತು ಸುತ್ತೂರು ಮಠಗಳ ಭಕ್ತರಾಗಿದ್ದ ಎಸ್.ಎಂ.ಕೃಷ್ಣ, ಅಲ್ಲಿನ ಅಕ್ಷರ ದಾಸೋಹ ಅನ್ನದಾಸೋಹದಿಂದ ಪ್ರೇರಣೆ ಪಡೆದರು. ಆ ಕಾರಣದಿಂದಲೇ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಾಲಾ ಮಕ್ಕಳು ಹಸಿವಿನಿಂದ ಬಳಲಬಾರದು ಎಂದು 2001ರಲ್ಲಿ ಮಧ್ಯಾಹ್ನದ ಬಿಸಿ ಊಟ ಯೋಜನೆ ಜಾರಿಗೆ ತಂದರು. ತಮ್ಮ ಆಡಳಿತಾವಧಿಯಲ್ಲಿ ಮಳೆ, ಬೆಳೆ ಇಲ್ಲದೆ, ಭೀಕರ ಬರ, ಅಶಾಂತಿಯ ವಾತಾವರಣ ಸೇರಿದಂತೆ ಹಲವು ಆರ್ಥಿಕ ಸಂಕಷ್ಟಗಳು ಎದುರಾಗಿದ್ದವು. ಆ ಸಂದರ್ಭದಲ್ಲಿ ಹಣಕಾಸು ಇಲಾಖೆ ಅಧಿಕಾರಿಗಳಿಗೆ ನಮ್ಮ ಯಾವ ಕಾರ್ಯಕ್ರಮಗಳು ನಿಂತರು ಚಿಂತೆಯಿಲ್ಲ, ಯಾವುದೇ ಕಾರಣಕ್ಕೂ ಮಧ್ಯಾಹ್ನದ ಬಿಸಿ ಊಟ ಯೋಜನೆ ನಿಲ್ಲಬಾರದು ಎಂದು ಸೂಚಿಸಿದ್ದರು. ಇದು ಅವರ ಜನಪರ ಕಾಳಜಿ, ಬದ್ಧತೆಗೆ ಹಿಡಿದ ಕೈಗನ್ನಡಿಯಾಗಿತ್ತು.