ಹಾವೇರಿ:ನಿರಂತರ ಮಳೆಗೆ ಮನೆಯ ಮೇಲ್ಚಾವಣಿ ಕುಸಿದು ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವಣೂರಿನ ಮಾದಾಪುರ ಗ್ರಾಮದಲ್ಲಿ ಇಂದು ನಸುಕಿನ ಜಾವ ನಡೆದಿದೆ. ಮೃತರನ್ನು ಚನ್ನಮ್ಮ(30) ಹಾಗು 2 ವರ್ಷದ ಅವಳಿ ಮಕ್ಕಳಾದ ಅಮೂಲ್ಯ ಮತ್ತು ಅನುಶ್ರೀ ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಮುತ್ತಪ್ಪ ಮತ್ತು ಅವರ ಪತ್ನಿ ಸುನೀತಾ ಹಾಗೂ ಯಲ್ಲಮ್ಮ(70) ಗಾಯಗೊಂಡಿದ್ದು, ಸವಣೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಯಲ್ಲಮ್ಮ ಅವರ ಪರಿಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಹಾವೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಮಾಜಿ ಶಾಸಕ ಅಜ್ಜಂಪೀರ ಖಾದ್ರಿ, ಎಸಿ ಮಹಮ್ಮದ್ ಅಜ್ಜೀಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
'ಆಂಬ್ಯುಲೆನ್ಸ್ ಬರುತ್ತಿದ್ದರೆ ಜೀವ ಉಳಿಯುತ್ತಿತ್ತು':ಮೃತರಸಂಬಂಧಿಕ ವಿರೇಶ್ ಸೊಪ್ಪಿನ ಮಾಹಿತಿ ನೀಡಿ, "ರಾತ್ರಿ 2.30ರ ಸುಮಾರಿಗೆ ಮೇಲ್ಚಾವಣಿ ಕುಸಿದಿದೆ. ಉಸಿರಾಟದ ತೊಂದರೆಯಾಗಿ ಮೂವರು ಸಾವನ್ನಪ್ಪಿದರು. ಸವಣೂರಿನಲ್ಲಿ ಯಾವಾಗಲೂ ಆಂಬ್ಯುಲೆನ್ಸ್ ಸಮಸ್ಯೆ ಇದ್ದದ್ದೇ. ಒಂದು ವೇಳೆ ಇದ್ದರೂ ಸಮಯಕ್ಕೆ ಸರಿಯಾಗಿ ಕಳುಹಿಸುವುದಿಲ್ಲ. ಘಟನೆಯ ತಕ್ಷಣವೇ ಆಂಬ್ಯುಲೆನ್ಸ್ ಬಂದಿದ್ದರೆ ಮೂವರ ಪ್ರಾಣ ಉಳಿಸಬಹುದಿತ್ತು" ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಪ್ರತಿಕ್ರಿಯೆ: ಹಾವೇರಿ ಡಿಸಿ ವಿಜಯ ಮಹಾಂತೇಶ ದಾನಮ್ಮನವರ್ ಪ್ರತಿಕ್ರಿಯಿಸಿ, "ವಾರದಿಂದ ಸತತವಾಗಿ ಮಳೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಅಧಿಕ ಮಳೆ ದಾಖಲಾಗಿದೆ. ಇಂದು ಮುಂಜಾನೆ 3 ಗಂಟೆಯ ಸುಮಾರಿಗೆ ಮಾದಾಪುರ ಗ್ರಾಮದಲ್ಲಿ ಮನೆಯ ಮೇಲ್ಚಾವಣಿ ಕುಸಿದು ಇಬ್ಬರು ಮಕ್ಕಳು ಸೇರಿ ಮೂವರು ಸಾವನ್ನಪ್ಪಿದ್ದಾರೆ. ಮನೆ ಮಾಲೀಕ ಹಾಗೂ ಅವರ ಪತ್ನಿ ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರ ತಾಯಿ ಯಲ್ಲಮ್ಮ(70) ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದರು.