ಗಂಗಾವತಿ (ಕೊಪ್ಪಳ) : ಮೇವು ಸೇವಿಸಿದ ಬಳಿಕ ನೀರು ಕುಡಿದ ಮೂರು ಜಾನುವಾರುಗಳು ಇದ್ದಕ್ಕಿದ್ದಂತೆ ಕುಸಿದು ಬಿದ್ದು, ಆರೋಗ್ಯದಲ್ಲಿ ಏರುಪೇರಾಗಿ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬೂದಗುಂಪಾ-ಹಾಲಸಮುದ್ರ ಗ್ರಾಮದಲ್ಲಿ ನಡೆದಿದೆ.
ಹಾಲಸಮುದ್ರ ಗ್ರಾಮದ ರೈತ ಶಿವಬಸ್ಸಪ್ಪ ಮರಳಿ ಎಂಬವರಿಗೆ ಸೇರಿದ ಎರಡು ಎತ್ತು, ಒಂದು ಎಮ್ಮೆ ಕರು ಮೃತಪಟ್ಟಿವೆ. ಅದೃಷ್ಟವಶಾತ್ ಪಶು ವೈದ್ಯರು ಒಂದು ಹಸುವಿಗೆ ಸಕಾಲಕ್ಕೆ ಚಿಕಿತ್ಸೆ ನೀಡುವ ಮೂಲಕ ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ.
ಘಟನೆಗೆ ಕಾರಣ ಏನು?: ಬೆಳಗ್ಗೆ ಎಂದಿನಂತೆ 6 ಗಂಟೆಗೆ ರೈತ ಶಿವಬಸ್ಸಪ್ಪ ಮರಳಿ, ತಮ್ಮ ನಾಲ್ಕು ಜಾನುವಾರುಗಳಿಗೆ ಮೇವು ಹಾಕಿದ್ದಾರೆ. ಬಳಿಕ ನೀರು ಕುಡಿಸಿದ್ದಾರೆ. ನೀರು ಸೇವಿಸಿ ಕೆಲವೇ ನಿಮಿಷಗಳಲ್ಲಿ ಎರಡು ಹಸು ಮತ್ತು ಒಂದು ಎಮ್ಮೆ ಕರುವಿನ ಬಾಯಿಯಿಂದ ರಕ್ತ ಸ್ರಾವವಾಗಿದೆ. ಮಲಮೂತ್ರ ವಿಸರ್ಜನೆ ಮಾಡಿಕೊಂಡಿವೆ. ಬಳಿಕ ಜಾನುವಾರುಗಳ ಉಸಿರಾಟದಲ್ಲಿ ಏರುಪೇರಾಗಿ ಸಾವನ್ನಪ್ಪಿವೆ. ಕೂಡಲೇ ರೈತ ಪಶು ವೈದ್ಯರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪಶು ವೈದ್ಯ ಡಾ. ಚನ್ನಬಸಪ್ಪ ಹಳ್ಳದ್, ಪ್ರಭಾರಿ ಪಶು ವೈದ್ಯಾಧಿಕಾರಿ ಡಾ. ಲಕ್ಷ್ಮಣ ನಾಯ್ಕ್ ತಂಡ ಚಿಕಿತ್ಸೆ ನೀಡಿದೆ.